ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ: ಶಾಸಕ ಬಿ.ಬಿ. ನಿಂಗಯ್ಯ

ಮೂಡಿಗೆರೆ, ಅ.31: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿರುವುದರಿಂದ ಪ್ರತೀ ಗ್ರಾಮ ಪಂಚಾಯತ್‌ಗಳಿಗೆ ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ತಮ್ಮ ಅನುದಾನದಿಂದ ಜನರೇಟರ್ ವಿತರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದಾರೆ ಎಂದು ಶಾಸಕ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಾಪಂ ಕಚೇರಿ ಆವರಣದಲ್ಲಿ ವಿವಿಧ ಗ್ರಾಪಂಗಳಿಗೆ ಜನರೇಟರ್ ವಿತರಣಾ ಸಮಾರಂಭದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 1,173 ಹಳ್ಳಿಗಳಿವೆ. 63 ಸಾವಿರ ಕಿ.ಮೀ. ರಸ್ತೆಯಿದೆ. ತಾವು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಜತೆಗೆ ಸಾಕಷ್ಟು ಮೂಲಭೂತ ಸೌಲಭ್ಯವನ್ನು ಕ್ಷೇತ್ರದ ಜನರಿಗೆ ತಲುಪಿಸಿರುವುದಾಗಿ ತಿಳಿಸಿದರು.
ತಾಲೂಕಿನ 18 ಗ್ರಾಪಂಗಳಿಗೆ ಜನರೇಟರ್ ವಿತರಿಸಿ ಬಳಿಕ ಮಾತನಾಡಿದ ಎಮ್ಮೆಲ್ಸಿ ಪ್ರಾಣೇಶ್, 21 ತಿಂಗಳ ನಂತರ ಜನರೇಟರ್ ಖರೀದಿಸಿ ಜಿಲ್ಲೆಯ 227 ಗ್ರಾಪಂಗಳ ಪೈಕಿ 72 ತಾಲೂಕಿಗೆ 18 ಜನರೇಟರ್ ಪ್ರಾಥಮಿಕ ಕಂತಿನಲ್ಲಿ ವಿತರಿಸಲಾಗುವುದು. ಮುಂದಿನ ತಮ್ಮ ಅನುದಾನ ಬಂದ ಬಳಿಕ ಎಲ್ಲ 227 ಗ್ರಾಪಂಗಳಿಗೆ ಜನರೇಟರ್ ಖರೀದಿಸಿ ನೀಡುವುದಾಗಿ ತಿಳಿಸಿದರು.
ಈ ವೇಳೆ ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾತನಾಡಿದರು.
ತಾಪಂ ಅಧ್ಯಕ್ಷ ಕೆ.ಸಿ. ರತನ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ಡಾ.ಮೋಟಮ್ಮ, ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಶಾಮಣ್ಣ, ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಸುಂದರ್‌ಕುಮಾರ್, ಬಿ.ಎಲ್. ದೇವರಾಜ್, ಭಾರತಿ ರವೀಂದ್ರ, ಪ್ರಮೀಳಾ, ಜಿಪಂ ಉಪಕಾರ್ಯದರ್ಶಿ ಗುರುದತ್, ತಾಪಂ ಇಒ ತಾರನಾಥ್, ದುಗ್ಗಮ್ಮ ಮತ್ತಿತರರಿದ್ದರು.







