ಸಫಾಯಿ ಕರ್ಮಚಾರಿಗಳಿಗೆ ಸಮಗ್ರ ಆರೋಗ್ಯ ತಪಾಸಣೆ: ವೆಂಕಟೇಶ್
ಕುಂದು ಕೊರತೆಗಳ ಪ್ರಗತಿ ಪರಿಶೀಲನಾ ಸಭೆ

ಚಿಕ್ಕಮಗಳೂರು, ಅ.31: ಸಫಾಯಿ ಕರ್ಮಚಾರಿಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಸಮಗ್ರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್ ಸೂಚಿಸಿದ್ದಾರೆ.
ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಕುಂದು ಕೊರತೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ 26 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ನೀಡುವಲ್ಲಿ ಜಿಲ್ಲೆಯು ಉತ್ತಮವಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 37 ಪ್ರಕರಣಗಳನ್ನು ಎಂ.ಎಸ್. ಆ್ಯಕ್ಟ್ 13ರಲ್ಲಿ ದಾಖಲು ಮಾಡಲಾಗಿದೆ. ಅದರಲ್ಲಿ 2 ಪ್ರಕರಣಗಳು ಈ ಜಿಲ್ಲೆಯಲ್ಲಿವೆ. ಕಾಳಿದಾಸ ನಗರ, ವೀರೇಂದ್ರ ಹೆಗಡೆ ರಸ್ತೆಯಲ್ಲಿ 300 ಫಿಟ್‌ಗಳು ಹಾಗೂ ಅರವಿಂದ ನಗರ ಬಾಲಾಜಿ ರಸ್ತೆಯಲ್ಲಿ 500 ಫಿಟ್‌ಗಳಿವೆ. ಈ ಕೆರೆಗಳಿಗೆ ಶೌಚಾಲಯದ ನೀರನ್ನು ಬಿಡಲಾಗುವುದು. ಇಂತಹ ಸ್ಥಳಗಳನ್ನು ಅನೈರ್ಮಲ್ಯ ಸ್ಥಳ ಎಂದು ಸೂಚಿಸಲಾಗಿದೆ. ಇಂತಹದನ್ನು ನಗರಸಭೆ ಅಧಿಕಾರಿಗಳು ಗುರುತಿಸಿ ಅವರಿಗೆ 3 ಬಾರಿ ನೋಟಿಸ್ ನೀಡಬೇಕು ಎಂದು ನುಡಿದರು.
ಅದನ್ನು ತಿರಸ್ಕರಿಸಿದ್ದಲ್ಲಿ 50 ಸಾವಿರ ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಶ್ರೀಮಂತರು ಅವರ ಸ್ವಂತ ಹಣದಲ್ಲಿ ಶೌಚಾಲಯವನ್ನು ನಿರ್ಮಿಸಬೇಕು. ಬಡವರು ಸರಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು. ಶೌಚಾಲಯಗಳು ಭರ್ತಿಯಾದ ಮೇಲೆ ಅದನ್ನು ತೆಗೆಯುವ ಸೌಲಭ್ಯಗಳಿದ್ದು, ಅದಕ್ಕೆ 500ರಿಂದ ಸಾವಿರ ಹಣವನ್ನು ನೀಡಬೇಕು. ಅದಕ್ಕಿಂತ ಹೆಚ್ಚು ಹಣವನ್ನು ನೀಡಬಾರದು ಎಂದು ಹೇಳಿದರು.
ಪ್ರತೀ 700 ಜನರಿಗೆ ಒಬ್ಬ ಎಂಬಂತೆ ಆಯ್ಕೆ ಮಾಡುವ ಬಗ್ಗೆ ಗೊಂದಲವಿದ್ದು, 1 ತಿಂಗಳೊಳಗೆ ಖಾಯಂಗೊಳಿಸಲಾಗುವುದು. ಅವರಿಗೆ 17 ಸಾವಿರ ವೇತನವನ್ನು ನೀಡಲಾಗುವುದು. ರಾಜ್ಯದಲ್ಲಿ ಗುತ್ತಿಗೆದಾರರ ಹಾವಳಿ ಹೆಚ್ಚಾಗಿದ್ದು, ಇದನ್ನು ಹೋಗಲಾಡಿಸಲು ನೇರವಾಗಿ ಕೈಗೆ ಹಣವನ್ನು ಕೊಡುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳಿಗೆ ಬೆಳಗ್ಗಿನ ಉಪಾಹಾರ ಹಾಗೂ ಆರೋಗ್ಯ ತಪಾಸಣೆಯನ್ನು ಅವರಿಗೆ ಮೀಸಲಿರುವ 24.10ರ ಅನುದಾನವನ್ನು ಬಳಸಿಕೊಳ್ಳಬಾರದು. ಇದನ್ನು ಸ್ವಂತ ನಿಧಿಯಿಂದ ನೀಡಬೇಕು ಎಂದರು.
ಇಲ್ಲಿಯ ಕೆಎಸ್ಸಾರ್ಟಿಸಿಯಲ್ಲಿ 6 ಜನ ಸಫಾಯಿಗಳು ಕೆಲಸ ಮಾಡುತ್ತಿದ್ದು, ಅವರಿಗೆ ಇಎಸ್‌ಐ, ಪಿಎಫ್ ಯಾವುದೇ ಸೌಲಭ್ಯ ಸಿಗದೆ ಕೇವಲ 7 ಸಾವಿರಕ್ಕೆ ದುಡಿಯುತ್ತಿದ್ದಾರೆ. ಇಲ್ಲಿಯ ಶೌಚಾಲಯದಲ್ಲಿ ಜನಸಾಮಾನ್ಯರಿಂದ 8 ರೂ.ನ್ನು ವಸೂಲಿ ಮಾಡುತ್ತಿದ್ದಾರೆ. ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನು ನೀಡಲಾಗಿದ್ದು, ಬಸ್‌ನಿಲ್ದಾಣದ ಅಕ್ಕಪಕ್ಕ ಮಲವಿಸರ್ಜನೆ ಮಾಡುವುದರಿಂದ ಪರಿಸರ ನೈರ್ಮಲ್ಯ ಹಾಳಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ಹೋಗಲಾಡಿಸಲು ಕೆಎಸ್ಸಾರ್ಟಿಸಿಯವರು ಉಚಿತ ಸೇವೆಯನ್ನು ನೀಡಬೇಕೆಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳು ಶೇ.85ರಷ್ಟು ಜನಸೇವಾ ಅವಧಿಯಲ್ಲೇ ಕಾಯಿಲೆಗಳಿಂದ ಮರಣ ಹೊಂದುತ್ತಾರೆ. ಶೇ.15ರಷ್ಟು ಜನ ಮಾತ್ರ ನಿವೃತ್ತಿ ಹೊಂದುತ್ತಾರೆ. ಅವರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ನೀಡಬೇಕು. ಅವುಗಳನ್ನು ಧರಿಸಿ ಸ್ವಚ್ಛತೆ ಮಾಡುವುದರ ಬಗ್ಗೆ ಅರಿವು ಮೂಡಿಸಬೇಕು. ಇದಕ್ಕಾಗಿಯೇ ಸರಕಾರ 1 ಲಕ್ಷ ರೂ.ನ್ನು ನಿಯೋಜಿಸಿದೆ. ಸರಿಯಾದ ಸುರಕ್ಷಾ ಕವಚಗಳನ್ನು ನೀಡದಿದ್ದಲ್ಲಿ 52 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.







