ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಆಗ್ರಹ: ಪ್ರಧಾನಿಗೆ ಮನವಿ

ಶಿವಮೊಗ್ಗ, ಅ.31: ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮುಂಬರುವ ಸಂಸತ್ ಅದಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕೆಂದು ಆಗ್ರಹಿಸಿ, ಮಂಗಳವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಕಳೆದ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಮಹಿಳೆಗೆ ನೀಡುವುದಾಗಿ ಹೇಳಿತ್ತು. ಮೂರು ವರ್ಷವಾದರೂ ಇನ್ನು ಅದು ಜಾರಿಯಾಗಿಲ್ಲ. ಭರವಸೆಯಾಗಿಯೇ ಉಳಿದಿದೆ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟರಲ್ಲಿಯೇ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸಬೇಕು. ಈಗಾಗಲೇ ಈ ಕುರಿತಂತೆ ಕಳೆದ ಅ.23ರಂದು ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದೆ. ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಇದು ತಕ್ಕ ಸಮಯವಾಗಿದೆ. ಮಸೂದೆ ಜಾರಿಗೊಳಿಸಬೇಕೆಂದು ಧರಣಿನಿರತರು ಒತ್ತಾಯಿಸಿದ್ದಾರೆ.
ಸಂಸತ್‌ನಲ್ಲಿ ಮಹಿಳೆಯರ ಪ್ರಮಾಣ ಶೇ.11ರಷ್ಟು ಮಾತ್ರ ಇದೆ. ಇದು ನಿರಾಶಾದಾಯಕ. ಬಹುತೇಕ ರಾಜ್ಯದ ವಿಧಾನಸಭೆೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಶಾಸನ ಸಭೆಯಲ್ಲಿರುವುದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಐತಿಹಾಸಿಕ ಅಸಮತೋಲನವನ್ನು ಸರಿಪಡಿಸಬೇಕು. ಕೊಟ್ಟ ಭರವಸೆಯಂತೆ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸು ಮಾಡುವ ಮೂಲಕ ಶೇ.33ರಷ್ಟು ಮೀಸಲಾತಿ ಕಡ್ಡಾಯವಾಗಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪಂಚಾಯತ್ ಮಟ್ಟದಿಂದ ಹಿಡಿದು ಲೋಕಸಭೆಯವರೆಗೆ ಮೀಸಲಾತಿ ದೊರೆತಲ್ಲಿ ಮಹಿಳೆಯರ ನಾಯಕತ್ವಕ್ಕೆ ಅವಕಾಶ ದೊರೆಯುತ್ತದೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರಿಗೆ ನೀತಿ ನಿರೂಪಣೆ ಮತ್ತು ಶಾಸಕಾಂಗದಲ್ಲಿ ಸಮಾನ ಪಾಲ್ಗೊಳ್ಳುವಿಕೆಯನ್ನು ನೀಡಬೇಕೆಂದು ಧರಣಿನಿರತರು ಆಗ್ರಹಿಸಿದ್ದಾರೆ. ಈ ಸಂದಭರ್ದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಎಂ.ಬಿ. ಕವಿತಾ ರಾಮೇಗೌಡ, ಸುಮತಿ ಕರ್ಕಡ, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.







