ಶಾಸಕ ಚಿಕ್ಕಮಾದು ನಿಧನಕ್ಕೆ ಗಣ್ಯರ ಕಂಬನಿ

ಬೆಂಗಳೂರು, ನ.1: ಹೆಗ್ಗಡದೇವನ ಕೋಟೆಯ ಶಾಸಕ ಚಿಕ್ಕಮಾದು ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.
ನಾಯಕ ಜನಾಂಗದ ನಾಯಕರಾಗಿ ಹೊರಹೊಮ್ಮಿದ ಚಿಕ್ಕಮಾದು ನಂತರದ ದಿನಗಳಲ್ಲಿ ಎಲ್ಲ ಸಮುದಾಯಗಳ ನಾಯಕರಾಗಿ ಜನನಾಯಕರಾಗಿ ಹೊರ ಹೊಮ್ಮಿದ್ದು ಇದೀಗ ಇತಿಹಾಸ. ಎಲ್ಲರೊಡನೆ ಪ್ರೀತಿ-ವಿಶ್ವಾಸಗಳಿಸಿ, ಎಲ್ಲರ ಸಹಕಾರ ಪಡೆದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದ ಚಿಕ್ಕಮಾದು ಅವರು ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾಲ್ಕೂವರೆ ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನನ್ನನ್ನು ಅಭಿಮಾನದಿಂದ ಅಭಿನಂದಿಸಿದ ನೆನಪು ನನ್ನಲ್ಲಿ ಹಚ್ಚ ಹಸಿರಾಗಿರುವಾಗಲೆ ಚಿಕ್ಕಮಾದು ಇದೀಗ ನಮ್ಮನ್ನು ಅಗಲಿ ಇತಿಹಾಸ ಪುಟಗಳನ್ನು ಸೇರಿದ್ದಾರೆ ಎಂಬ ಕಟು ವಾಸ್ತವ ನನ್ನನ್ನು ಘಾಸಿಗೊಳಿಸಿೆ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಚಿಕ್ಕಮಾದು ಅವರ ನಿಧನದ ಸುದ್ದಿ ಕೇಳಿ ನನಗೆ ಬಹಳ ನೋವಾಗಿದೆ. ನಾವೆಲ್ಲ ಒಬ್ಬ ಸಜ್ಜನ ಹಾಗು ಸರಳ ವ್ಯಕ್ತಿತ್ವದ ನಾಯಕನನ್ನು ಕಳೆದು ಕೊಂಡಿದ್ದೀವಿ. ಮೃದು ಸ್ವಭಾವದ ಚಿಕ್ಕಮಾದು ಅವರನ್ನು ಕಳೆದುಕೊಂಡು ತೀವ್ರ ಆಘಾತವಾಗಿದೆ. ಸಹೋದರರಂತಿದ್ದ ಚಿಕ್ಕಮಾದು ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಾರ್ಥಿಸಿದ್ದಾರೆ.
ಚಿಕ್ಕಮಾದು ಅಕಾಲಿಕ ನಿಧನ ದುಖಃ ತಂದಿದೆ. ನಾಡು ಜನಪರ ಕಾಳಜಿಯುಳ್ಳ ಜನಪ್ರತಿನಿಧಿಯನ್ನ ಕಳೆದುಕೊಂಡಿದೆ. ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದರು. ಜೆಡಿಎಸ್ ಪಕ್ಷ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಜನಪರ ನಿಲುವು, ಬದ್ಧತೆ ಇತರೆ ಜನಪ್ರತಿನಿಧಿಗಳಿಗೆ ಅನುಕರಣೀಯ. ನಿಗರ್ವಿಯಾಗಿದ್ದ ಚಿಕ್ಕಮಾದು ಸರಳ ಸಜ್ಜನಿಕೆಯ ಪ್ರತಿರೂಪವಾಗಿದ್ದರು. ಹಿಂದುಳಿದ ವರ್ಗದ ನಾಯಕನ ನಿಧನದಿಂದ ಪಕ್ಷಕ್ಕೂ, ನಾಡಿಗೂ ಅಪಾರ ನಷ್ಟ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಾದು ದಲಿತ ಸಂಘರ್ಷ ಸಮಿತಿಯ ಮುಂಚೂಣಿ ನಾಯಕರಾಗಿ ಹಳೇ ಮೈಸೂರು ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ ಉತ್ತಮ ಕೆಲಸಗಳನ್ನು ಮಾಡಿ ಅಪಾರ ಜನಾನುರಾಗವನ್ನು ಗಳಿಸಿದ್ದರು. ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.







