ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬ ಕದ್ದೊಯ್ದ ಕಳ್ಳ

ಸಿದ್ದಾಪುರ (ಕೊಡಗು), ನ.1: ಸಮೀಪದ ಅಮ್ಮತ್ತಿ ಜುಮಾ ಮಸೀದಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಅಲ್ಲಿದ್ದ ಕಾಣಿಕೆ ಡಬ್ಬ ಕದ್ದೊಯ್ದು ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬುಧವಾರ ಬೆಳಗ್ಗೆ ನಮಾಜ್‍ಗೆ ಆಝಾನ್ ಕೊಡಲು ತೆರಳಿದ ಉಸ್ತಾದ್‍ಗೆ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಮಹಲ್ಲ್ ಸಮಿತಿಗೆ ವಿಷಯ ತಿಳಿಸಿದ್ದಾರೆ. ಕಳವಾಗಿದ್ದ ಜಾಗಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸೈ ಸುರೇಶ್ ಬೋಪಣ್ಣ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಕೊಮ್ಮೆತ್ತೋಡು ಮಸೀದಿ ಮತ್ತು ಚರ್ಚ್‍ಗಳಲ್ಲೂ ಕಳ್ಳತನ ಆಗಿದ್ದು, ಸ್ಥಳೀಯ ವ್ಯಕ್ತಿಯೇ ಕಳ್ಳತನ ಮಾಡಿರುವುದಾಗಿ ಶಂಕಿಸಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸೆರೆ: ಕಳವು ಮಾಡಿದ ವ್ಯಕ್ತಿಯ ಚಲನವಲನಗಳು ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಆತ ನೀಲಿ ಬಣ್ಣದ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ. ದೂರವಾಣಿಯಲ್ಲಿ ಮಾತನಾಡುತ್ತಾ ಮಸೀದಿಯ ಒಳ ನುಗ್ಗಿದ ಆತ ಹಿಂಬಾಗಿಲ ಮೂಲಕ ಹೊರ ನಡೆದಿದ್ದಾನೆ. ರಾತ್ರಿ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆತ ದೂರವಾಣಿಯಲ್ಲಿ ಸ್ಥಳೀಯ ವ್ಯಕ್ತಿಯ ಜತೆ ಮಾತನಾಡಿ ಮಾಹಿತಿ ಪಡೆದು ಕಳ್ಳತನ ಮಾಡಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯ ಗಳನ್ನು ಕಲೆ ಹಾಕಿ ಕೇಸು ದಾಖಲಿಸಿಕೊಂಡಿದ್ದಾರೆ.







