ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೊಣಾಜೆ, ನ. 1: ಮಂಗಳೂರಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕನ್ನಡ ಧ್ವಜಾರೋಹಣಗೈದ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಡಾ. ಶಿವಕುಮಾರ್ ಹಿರೇಮಠ್ ಮಾತನಾಡಿ, "ಕನ್ನಡವು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ ಮತ್ತು ಅಗ್ರ 30 ಭಾಷೆಗಳಲ್ಲಿ ಸ್ಥಾನ ಪಡೆದಿದೆ. ನಮ್ಮ ದೈನಂದಿನ ಜೀವನದಲ್ಲಿ ಇದನ್ನು ಬಳಸುವುದರ ಮೂಲಕ ಭಾಷೆಯನ್ನು ನಾವು ಜೀವಿಸೋಣ " ಎಂದು ಕರೆಕೊಟ್ಟರು.
ಆಲೂರು ವೆಂಕಟರಾಯರ ಮುಂದಾಳತ್ವದ ಸಮಿತಿಯ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದ ರಚನೆ ಹಾಗು ಮರುನಾಮಕರಣದ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾಧ್ಯಾಪಕ ಮತ್ತು ಅರಿವಳಿಕೆ ಇಲಾಖೆಯ ಮುಖ್ಯಸ್ಥ ಡಾ. ಆನಂದ ಬಂಗೇರ ಸ್ವಾಗತಿಸುತ್ತಾ 'ಗಣರಾಜ್ಯೋತ್ಸವ ಮತ್ತು ನವರಾಜ್ಯೋತ್ಸವದ' ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು.
ಮನೋರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ ಸತೀಶ್ ರಾವ್ ನಿಟ್ಟೆ ವಿಶ್ವವಿದ್ಯಾಲಯ ಹಾಗು ಕೆ ಸ್ ಹೆಗ್ಡೆ ಆಸ್ಪತ್ರೆಯ ವತಿಯಿಂದ ವಂದನಾರ್ಪಣೆಗೈದರು. ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿ ಮತ್ತು ಅರಿವಳಿಕಾ ವಿಭಾಗದ ಪ್ರಾಧ್ಯಾಪಕಿ ಡಾ ಸುಮಲತಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.





