ಹೊಸನಗರ ವೃತ್ತ ನಿರೀಕ್ಷಕರ ವಿರುದ್ದ ಕ್ರಮ ಜರುಗಿಸಲು ಆಗ್ರಹಿಸಿ ಎಸ್.ಪಿ.ಗೆ ಮನವಿ

ಶಿವಮೊಗ್ಗ, ನ. 1: ಜಿಲ್ಲೆಯ ಹೊಸನಗರದ ವೃತ್ತ ನಿರೀಕ್ಷಕ ಮಂಜುನಾಥ ಗೌಡರವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಬಧವಾರ ಹೊಸನಗರ ತಾಲೂಕು ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಎಸ್.ಪಿ. ಅಭಿನವ್ ಖರೆಯವರಿಗೆ ಮನವಿ ಪತ್ರ ಅರ್ಪಿಸಿದರು.
ವೃತ್ತ ನಿರೀಕ್ಷಕರು ಠಾಣೆಗೆ ನ್ಯಾಯ ಕೇಳಿಕೊಂಡು ಬರುವ ನಾಗರೀಕರನ್ನು ಆರೋಪಿಗಳ ರೀತಿಯಲ್ಲಿ ನೋಡುತ್ತಿದ್ದಾರೆ. ಏಕವಚನದಲ್ಲಿ ನಿಂದಿಸುತ್ತಾರೆ. ಇತ್ತೀಚೆಗೆ ಹೊಸನಗರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಲು ಪಕ್ಷದ ಕಾರ್ಯಕರ್ತರು ಅವರ ಬಳಿ ತೆರಳಿದ್ದಾಗ ಅನುಚಿತವಾಗಿ ನಡೆದುಕೊಂಡಿದ್ದಾರೆ.
ಏಕವಚನದಲ್ಲಿ ನಿಂದಿಸಿದ್ದಾರೆ. ಜೊತೆಗೆ ನಾವು ಕೊಟ್ಟ ಮಾಹಿತಿಯನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರಿಗೆ ನೀಡಿ, ಅವರನ್ನು ನಮ್ಮ ಮೇಲೆ ಎತ್ತಿಕಟ್ಟುವ ಕೆಲಸ ನಡೆಸಿದ್ದಾರೆ. ಸಂಬಂಧಿಸಿದವರ ವಿರುದ್ದ ಯಾವುದೇ ಕ್ರಮಕೈಗೊಳ್ಳದೆ ಕಾನೂನು ಎಲ್ಲೆ ಮೀರಿ ಅಕ್ರಮಗಳಿಗೆ ಪ್ರೋತ್ಸಾಹಿಸುವ ಕೆಲಸ ನಡೆಸುತ್ತಿದ್ದಾರೆ ಎಂದು ಸಂಘಟನೆಯು ಮನವಿ ಪತ್ರದಲ್ಲಿ ಆರೋಪಿಸಿದೆ.
ಹೊಸನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದರೂ ಕಡಿವಾಣಕ್ಕೆ ವೃತ್ತ ನಿರೀಕ್ಷಕರು ಕ್ರಮ ಜರುಗಿಸಿಲ್ಲ. ಬದಲಾಗಿ ದಂಧೆಕೋರರಿಗೆ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿರುವ ಸಿ. ಸಿ. ಕ್ಯಾಮರಾಗಳನ್ನು ದುರ್ಬಲಗೊಳಿಸಿ, ಅಕ್ರಮಗಳ ಸಾಕ್ಷ್ಯಗಳು ಸಿಗದಂತೆ ಮಾಡುತ್ತಿದ್ದಾರೆ ಎಂದು ಸಂಘಟನೆ ದೂರಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ವೃತ್ತ ನಿರೀಕ್ಷಕ ಮಂಜುನಾಥಗೌಡ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕು. ಹೊಸನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯವತಿಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.







