ಉ.ಪ್ರ.: ಬಾಲಕನ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಕಾರು ಸಚಿವರದ್ದು!
ತನಿಖೆಯಿಂದ ಬಹಿರಂಗ

ಲಕ್ನೋ,ನ.1: ಗೊಂಡಾ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಐದರ ಹರೆಯದ ಬಾಲಕನಿಗೆ ಢಿಕ್ಕಿ ಹೊಡೆದು ಆತ ಸ್ಥಳದಲ್ಲಿಯೇ ಸಾವನ್ನಪ್ಪಲು ಕಾರಣವಾಗಿ ಪರಾರಿಯಾಗಿದ್ದ ಕಾರು ಸಚಿವ ಓಂ ಪ್ರಕಾಶ ರಾಜಭರ್‌ಗೆ ಸೇರಿದ್ದು ಮತ್ತು ಅಪಘಾತ ಸಂಭವಿಸಿದಾಗ ಅವರು ಕಾರಿನಲ್ಲಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದ್ದು, ಇದು ಉತ್ತರ ಪ್ರದೇಶದ ಬಿಜೆಪಿ ಸರಕಾರಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.
ಗ್ರಾಮದ ರಸ್ತೆಬದಿಯಲ್ಲಿ ಆಟವಾಡುತ್ತಿದ್ದ ಬಾಲಕ ಶಿವ ಗೋಸ್ವಾಮಿಗೆ ಸಚಿವರು ಪ್ರಯಾಣಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಆದರೆ ಅದು ಅಪಘಾತದ ಬಳಿಕ ಸಚಿವರ ಬೆಂಗಾವಲು ಕಾರುಗಳೊಂದಿಗೆ ಸ್ಥಳದಿಂದ ಪರಾರಿಯಾಗಿತ್ತು.
ಘಟನೆ ನಡೆದಾಗ ತಾನು ಆ ಸ್ಥಳದಿಂದ 25 ಕಿ.ಮೀ.ದೂರದಲ್ಲಿದ್ದೆ. ಘಟನಾ ಸ್ಥಳಕ್ಕೆ ಭೇಟಿ ನೀಡಲು ತಾನು ಬಯಸಿದ್ದೆನಾದರೂ ಪೊಲೀಸರು ಭದ್ರತೆಯ ಕಾರಣ ನೀಡಿ ತನ್ನನ್ನು ತಡೆದಿದ್ದರು ಎಂದು ರಾಜಭರ್ ಆಗ ಹೇಳಿಕೊಂಡಿದ್ದರು.
ಅಪಘಾತವೆಸಗಿದ್ದ ಕಾರಿನ ಮೇಲೆ ಹೂವಿನ ಎಸಳುಗಳಿದ್ದವು ಮತ್ತು ಸಚಿವರು ಕಾರುಗಳ ಪೈಕಿ ಒಂದರಲ್ಲಿದ್ದರು ಎಂದು ಬಾಲಕನ ಹೆತ್ತವರು ಹೇಳಿದ್ದರು. ಪೊಲೀಸರು ಸಚಿವರ ವಾಹನಗಳ ಸಾಲಿನಲ್ಲಿದ್ದ ಕಾರುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಸಚಿವರು ಕುಳಿತಿದ್ದ ಕಾರು ಅಪಘಾತವೆಸಗಿದ್ದು ದೃಢಪಟ್ಟಿತ್ತು.
ಘಟನೆಯ ಬಳಿಕ ಬಂಧಿಸಲ್ಪಟ್ಟಿದ್ದ ಕಾರು ಚಾಲಕನೂ ಸಚಿವರು ಕಾರಿನಲ್ಲಿ ಇದ್ದರು ಎನ್ನುವುದನ್ನು ದೃಢಪಡಿಸಿದ್ದ. ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಆದೇಶಿಸಿದ್ದರು.
ರಾಜಭರ್ ಈ ಹಿಂದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸುವ ಪೋಷಕರನ್ನು ಆಹಾರ ಮತ್ತು ನೀರೂ ಇಲ್ಲದೆ ಜೈಲಿನಲ್ಲಿ ಕೂಡಿಹಾಕುವುದಾಗಿ ಬೆದರಿಕೆಯೊಡ್ಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು. ಘಾಝಿಪುರ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಗೊಳಿಸದಿದ್ದರೆ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿಯೂ ಅವರು ಬೆದರಿಸಿದ್ದರು.







