ಸಂಸದರು ಮತ್ತು ಶಾಸಕರ ವಿರುದ್ಧದ 1,581 ಪ್ರಕರಣಗಳ ವಿವರ ಕೇಳಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ನ.1: ರಾಜಕಾರಣಿಗಳು 2014ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಘೋಷಿಸಿರುವಂತೆ ಸಂಸದರು ಮತ್ತು ಶಾಸಕರು ಭಾಗಿಯಾಗಿರುವ 1,581 ಪ್ರಕರಣಗಳ ವಿವರಗಳನ್ನು ತನ್ನ ಮುಂದಿಡುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ.
ಈ 1,581 ಪ್ರಕರಣಗಳ ಪೈಕಿ ಎಷ್ಟು ಒಂದು ವರ್ಷದೊಳಗೆ ಇತ್ಯರ್ಥಗೊಂಡಿವೆ ಮತ್ತು ಎಷ್ಟು ಪ್ರಕರಣಗಳಲ್ಲಿ ಆರೋಪಿಗಳ ದೋಷನಿರ್ಣಯ ಅಥವಾ ಖುಲಾಸೆಯಾಗಿದೆ ಎನ್ನುವುದನ್ನು ತನಗೆ ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿದೆ.
2014ರಿಂದ ಈವರೆಗೆ ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ಮತ್ತು ಈ ಪ್ರಕರಣಗಳ ವಿಲೇವಾರಿ ಕುರಿತು ವಿವರಗಳನ್ನೂ ನೀಡುವಂತೆ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ನವೀನ ಸಿನ್ಹಾ ಅವರ ಪೀಠವು ಸೂಚಿಸಿದೆ.
ರಾಜಕೀಯದ ನಿರಪರಾಧೀಕರಣ ಆಗಬೇಕು ಮತ್ತು ರಾಜಕಾರಣಿಗಳನ್ನೊಳಗೊಂಡ ಪ್ರಕರಣಗಳ ವಿಚಾರಣೆಗೆ ಮತ್ತು ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ತಾನು ವಿರುದ್ಧವಾಗಿಲ್ಲ ಎಂದು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರವು, ಕ್ರಿಮಿನಲ್ ಪ್ರಕರಣಗಳಲ್ಲಿ ದೋಷನಿರ್ಣಯಗೊಂಡ ರಾಜಕಾರಣಿಗಳನ್ನು ಆಜೀವ ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗವು ಮಾಡಿರುವ ಶಿಫಾರಸು ಗಳು ಸರಕಾರದ ಸಕ್ರಿಯ ಪರಿಶೀಲನೆಯಲ್ಲಿವೆ ಎಂದು ಹೇಳಿತು.
ಇಂತಹ ನ್ಯಾಯಾಲಯಗಳ ಸ್ಥಾಪನೆಗಾಗಿ ಯೋಜನೆಯನ್ನು ತನಗೆ ಸಲ್ಲಿಸುವಂತೆ ಮತ್ತು ಈ ಉದ್ದೇಶಕ್ಕಾಗಿ ಮೀಸಲಿಡಬಹುದಾದ ಮೊತ್ತವನ್ನೂ ತಿಳಿಸುವಂತೆ ಪೀಠವು ಕೇಂದ್ರಕ್ಕೆ ನಿರ್ದೇಶ ನೀಡಿತು.
ಈ ಎಲ್ಲ ವಿವರಗಳನ್ನು ಆರು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಸರಕಾರವನ್ನು ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ವಿಚಾರಣೆಯನ್ನು ಡಿ.13ಕ್ಕೆ ನಿಗದಿಗೊಳಿಸಿತು.
ರಾಜಕಾರಣಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಆರು ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿರುವ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಯನ್ನು ಸಂವಿಧಾನಾತೀತವೆಂದು ಘೋಷಿಸುವಂತೆ ಮತ್ತು ಅಂತಹವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಜೀವ ನಿಷೇಧವನ್ನು ಹೇರುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ವಕೀಲ ಅಶ್ವಿನಿ ಕುಮಾರ ಅವರು ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಇತರ ಅನೇಕರು ಈ ಅರ್ಜಿಯಲ್ಲಿ ಸಹ ಕಕ್ಷಿದಾರರಾಗಿ ಸೇರಿಕೊಂಡಿದ್ದಾರೆ.
ಈ ಅರ್ಜಿಯ ಕುರಿತು ಸ್ಪಷ್ಟವಾದ ನಿಲುವು ತಳೆಯದ್ದಕ್ಕೆ ಸರ್ವೋಚ್ಚ ನ್ಯಾಯಾಲಯವು ಜು.12ರಂದು ಚುನಾವಣಾ ಆಯೋಗವನ್ನು ತರಾಟೆಗೆತ್ತಿಕೊಂಡ ಬಳಿಕ, ತಾನು ಇದನ್ನು ಬೆಂಬಲಿಸುತ್ತೇನೆ ಮತ್ತು ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆ ಎಂದು ಆಯೋಗವು ತಿಳಿಸಿತ್ತು.
ಕೇಂದ್ರವು ತನ್ನ ಪ್ರಮಾಣಪತ್ರದಲ್ಲಿ ಜೈಲು ಶಿಕ್ಷೆ ಅನುಭವಿಸಿರುವ ರಾಜಕಾರಣಿಗಳಿಗೆ ಆಜೀವ ನಿಷೇಧವನ್ನು ಕೋರಿರುವ ಈ ಅರ್ಜಿಯು ವಿಚಾರಣಾರ್ಹವಲ್ಲ ಮತ್ತು ಅದನ್ನು ವಜಾಗೊಳಿಸಬೇಕು ಎಂದು ಕೋರಿತ್ತು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.







