ದ.ಕ.ಜಿಲ್ಲಾ ಎಸ್‌ಡಿಪಿಐ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ

ಮಂಗಳೂರು, ನ. 1: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಅನಂತರ ಆಕರ್ಷಕ ಬ್ಯಾಂಡ್, ಕನ್ನಡ ಹಾಡು ಮತ್ತು ಕನ್ನಡ ಪರ ಘೋಷಣೆಗಳೊಂದಿಗೆ ಮಂಗಳೂರು ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪಾರ್ಕ್‌ನವರೆಗೆ ರ್ಯಾಲಿಯ ಮೂಲಕ ತೆರಳಿ ಗಾಂಧಿ ಪಾರ್ಕ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ರಾಜ್ಯದ ನೆಲ, ಜಲ, ಗಡಿ ಮತ್ತು ಭಾಷೆಯ ರಕ್ಷಣೆಗಾಗಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಹಲವು ಜೀವಗಳನ್ನು ರಕ್ಷಿಸಿದ ಅಪತ್ಭಾಂದವರಾದ ಮುಳುಗು ತಜ್ಞರ ತಂಡದ 5 ಮಂದಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಖ್ಯಾತ ಹಾಡುಗಾರ ಶರೀಫ್ ಪರ್ಲಿಯ ಕನ್ನಡ ಅಭಿಮಾನದ ಹಾಡನ್ನು ಹಾಡಿ ಅಭಿಮಾನಿಗಳ ಮನಸೂರೆಗೈದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆ್ಯಂಟನಿ ಪಿಡಿ, ಆನಂದ ಮಿತ್ತಬೈಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್‌ಡಿಎಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಹನೀಫ್ ಕಾಟಿಪಳ್ಳ, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಎಸ್‌ಡಿಎಯು ಮಂಗಳೂರು ವಲಯ ಅಧ್ಯಕ್ಷ ನೌಫಲ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ ಸ್ವಾಗತಿಸಿ,ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಮಂಚಿ ವಂದಿಸಿದರು.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.







