ತಲಪಾಡಿ: ಗಡಿನಾಡು ರಕ್ಷಣಾ ವೇದಿಕೆಯ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ
ಉಳ್ಳಾಲ, ನ. 1: ತುಳು ಆಡಳಿತ ಭಾಷೆ ಅಲ್ಲದಿದ್ದರೂ ತುಳು ಭಾಷೆಯ ಹಿನ್ನೆಲೆಯಲ್ಲಿ, ಸಂಸ್ಕೃತಿ, ನೋವು ಅಡಕವಾಗಿರುವ ನಿಟ್ಟಿನಲ್ಲಿ ಭಾಷೆಗೆ ಮಾನ್ಯತೆ ನೀಡುವುದು ಅಗತ್ಯವಿದೆಯಾದರೂ, ತುಳು ಭಾಷೆಗೆ ಮಾನ್ಯತೆ ದೊರಕಿಲ್ಲ ಎಂಬ ನೆಪವೊಡ್ಡಿ ಕನ್ನಡ ರಾಜ್ಯೋತ್ಸವದ ದಿನದಂದು ಸಂಘಟನೆಗಳು ಕರಾಳ ದಿನವನ್ನು ಆಚರಿಸುವುದು ಸರಿಯಲ್ಲ ಎಂದು ಖ್ಯಾತ ವಕೀಲರದ ದಿನೇಶ್ ಉಳೇಪ್ಪಾಡಿ ಅಭಿಪ್ರಾಯ ಪಟ್ಟರು.
ತಲಪಾಡಿಯ ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ವಾರ್ಷಿಕೋತ್ಸವದ ಪ್ರಯುಕ್ತ ಬುಧವಾರದಂದು ತಲಪಾಡಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಕನ್ನಡಿಗರ ಹೋರಾಟದ ಫಲವಾಗಿ ಕನ್ನಡ ಭಾಷೆಗೆ ಸಾಂವಿಧನಾತ್ಮಕ ಮಾನ್ಯತೆ ಸಿಕ್ಕಿದೆ.ಆದರೆ ಕನ್ನಡಿಗರಲ್ಲಿ ಅಂದು ಇದ್ದಂತಹ ಮನಸ್ಥಿತಿ ಇಂದು ಇಲ್ಲದಂತಾಗಿದೆ.ನಾವೆಲ್ಲರೂ ಒಂದೇ ಎನ್ನುವ ನಿಷ್ಕಲ್ಮಶ ಮನಸ್ಥಿತಿಯನ್ನು ಎಲ್ಲರೂ ಮೈಗೂಡಿಸಿ ಕೊಂಡಾಗಲೇ ಕನ್ನಡವನ್ನು ಬೆಳೆಸಲು ಸಾಧ್ಯ ಎಂದರು.
ಕೆಲವರು ಇಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಜಾತಿ ಧರ್ಮದ ಆಧಾರದಲ್ಲಿ ಹೆಂಡತಿ ಮಕ್ಕಳನ್ನು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನನಂತಹ ದೇಶ ಭಕ್ತನ ಜಯಂತಿಯನ್ನು ಆಚರಿಸಬಾರದೆನ್ನುವ ಮಟ್ಟಕ್ಕೆ ಇಳಿದಿರುವುದು ವಿಷಾದಕರ ಸಂಗತಿ ಎಂದರು.
ಅನುಪಮಾ ಮಾಸಿಕದ ಸಂಪಾದಕಿ ಶಹನಾರ್ ಎಂ ಮಾತನಾಡಿ ಬಿಜಾಪುರ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ತಾನು ಕನ್ನಡದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನೆರೆದಿದ್ದ ವಿದ್ಯಾರ್ಥಿಗಳು ಉರ್ದುವಲ್ಲಿ ಮಾತಾಡುವಂತೆ ಒತ್ತಾಯಿಸಿದ್ದು ಕನ್ನಡದ ರಾಜ್ಯದಲ್ಲೇ ಅನುಭವಿಸಿದ ಮೆರೆಯಲಾಗದ ಕಹಿ ನೆನಪಾಗಿದೆ. ಕೇರಳ,ತಮಿಳುನಾಡಿಗೆ ನಾವು ತೆರಳಿದರೆ ಅಲ್ಲಿಯವರು ನಮಗೆ ಅವರ ಭಾಷೆಯಲ್ಲೇ ಮಾತನಾಡಿಸಿ ಮಳಯಾಳಿ,ತಮಿಳನ್ನು ಕಲಿಸುವುದಾದರೆ,ನಾವು ಕನ್ನಡಿಗರು ಅನ್ಯ ರಾಜ್ಯದವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಸಲು ಏಕೆ ಸಾಧ್ಯವಾಗಿಲ್ಲವೆಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ಐ.ಯು.ಎಮ್.ಎಲ್,ಮಂಜೇಶ್ವರ ಬ್ಲಾಕ್ ಅಧ್ಯಕ್ಷರಾದ ಸೈಯದ್ ಯು.ಕೆ.ಸೈಫುಲ್ಲಾ ತಂಞಳ್ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ನೌಕಾಪಡೆಯ ಕಮಾಂಡರ್ ವಿಜಯ್ ಕುಮಾರ್,ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು,ಸದಸ್ಯರಾದ ಸಿದ್ಧೀಕ್ ಕೊಳಂಗೆರೆ,ಸುರೇಖ ಚಂದ್ರಹಾಸ್, ಹೈದರ್ ಪರ್ತಿಪ್ಪಾಡಿ, ಹಾಜಿ ಹಮೀದ್ ಕಂದಕ್, ಸೊಹೈಲ್ ಕಂದಕ್, ತಲಪಾಡಿ ಮರಿಯಾಶ್ರಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಪಿಂಟೋ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ, ಕವಿ ಹುಸೇನ್ ಕಾಟಿಪಳ್ಳ, ಮಂಜೇಶ್ವರದ ಸಾಹಿತಿ ಮತ್ತು ಖ್ಯಾತ ವೈದ್ಯರಾದ ಡಾ.ರಮಾನಂದ ಬನಾರಿ, ನಿವೃತ್ತ ಪ್ರಾಂಶುಪಾಲ ಸುಭಾಷ್ ಚಂದ್ರ ಕಣ್ವತೀರ್ಥ, ಮುಸ್ಲಿಂ ಲೀಗ್ ಕರ್ನಾಟಕ ಕಾರ್ಯದರ್ಶಿ ಸಿದ್ಧೀಕ್ ಎ.ಕೆ ಬಂಟ್ವಾಳ, ವಕೀಲರಾದ ಮದುಸೂಧನ್ ಆಚಾರ್ಯ, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಕ್ ತಲಪಾಡಿ ಉಪಸ್ಥಿತರಿದ್ದರು.









