ನಾಡಗೀತೆ ಹಾಡುವಾಗ ಭಾವಪರವಶನಾಗುತ್ತೇನೆ: ಜನಾರ್ದನ ರೆಡ್ಡಿ

ಬೆಂಗಳೂರು, ನ.1: ಯಾವುದೇ ಸಂದರ್ಭದಲ್ಲಿ ನಾಡಗೀತೆ ಮೊಳಗಿದಾಗ ನಾನು ಭಾವ ಪರವಶನಾಗುತ್ತೇನೆ. ಹೀಗಾಗಿ ನಾಡಗೀತೆಯನ್ನು ಹೊಸ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ನಾಡಗೀತೆಗೆ ದೃಶ್ಯಗಳನ್ನು ಸಂಯೋಜಿಸಿ ಧ್ವನಿ ಸುರಳಿ ಬಿಡುಗಡೆಗೊಳಿಸುತ್ತಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ನಡೆದ ‘ನಾಡಗೀತೆಗೆ ನುಡಿ ನಮನ’ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ನಾಡಗೀತೆಯ ಬಗ್ಗೆ ಬಹಳಷ್ಟು ಪ್ರೀತಿ ಹೊಂದಿದ್ದೇನೆ. ಶಾಲಾ ದಿನಗಳಿಂದಲೇ ಸಂಗೀತ, ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದಿದ್ದೇನೆ ಎಂದು ತಿಳಿಸಿದರು.
ಸಾಹಿತ್ಯದಲ್ಲಿ ಆಸಕ್ತಿ ಇರುವ ಕಾರಣ 18ನೆ ವಯಸ್ಸಿನಲ್ಲಿ ಚಿತ್ರರಂಗ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ನಂತರದ ದಿನದಲ್ಲಿ ಉದ್ಯಮ, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಹೆಚ್ಚಿನ ಗಮನ ಆ ಕಡೆ ನೀಡಲಾಗಲಿಲ್ಲ. ಇನ್ನು ಮುಂದೆ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯಗೊಂಡು, ನಾಡು, ನುಡಿಯ ಕುರಿತು ಅಭಿಮಾನ ಮೂಡುವಂತಹ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ ಎಂದು ಅವರು ಹೇಳಿದರು.
‘ನಾಡಗೀತೆಗೆ ನುಡಿ ನಮನ’ ಧ್ವನಿ ಸುರಳಿಯು ನಿರ್ದೇಶಕ ಅಯ್ಯಪ್ಪಪಿ. ಶರ್ಮಾ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ. ಕೌಶಿಕ್ ಹರ್ಷ ಸಂಗೀತ ನೀಡಿದ್ದಾರೆ. ಕಲಾವಿದ ಶಶಿಧರ್ ಅಡಪ ಕಲಾ ನಿರ್ದೇಶಕರಾಗಿದ್ದಾರೆ ಮತ್ತು ಲಕ್ಷ್ಮಣ್ ರೆಡ್ಡಿ ಸಂಕಲನ ಮಾಡಿದ್ದಾರೆ. ಕನ್ನಡಪರ ಕೆಲಸಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.







