ಉದ್ಯಮ ಸ್ನೇಹಿ ಕೇಂದ್ರದಿಂದ ಸಣ್ಣ ಉದ್ಯಮಿಗಳು ನಾಶ: ರಾಹುಲ್ ಗಾಂಧಿ

ಭರೂಚ್, ನ. 1: ಉದ್ಯಮ ಸ್ನೇಹಿ ಕೇಂದ್ರ ಸರಕಾರದ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ), ನೋಟು ನಿಷೇಧ ಸಣ್ಣ ಉದ್ಯಮಿಗಳು ಹಾಗೂ ಸಣ್ಣ ಅಂಗಡಿ ಮಾಲಕರು ಸುಲಲಿತವಾಗಿ ವ್ಯವಹಾರ ನಡೆಸುವುದನ್ನು ನಾಶಮಾಡಿದೆ ಎಂದಿದ್ದಾರೆ.
ಸರಕಾರ ಸಂಪನ್ಮೂಲವನ್ನು ಕೈಗಾರಿಕೋದ್ಯಮಿಗಳಿಗೆ ವರ್ಗಾಯಿಸುತ್ತಿದೆ ಎಂದು ಹೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.
ಭರೂಚ್‌ನಲ್ಲಿ ನವಸರ್ಜನ ಯಾತ್ರೆಯ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ಗಬ್ಬರ್ ಸಿಂಗ್ ತೆರಿಗೆ’ ಎಂದು ಪುನರುಚ್ಚರಿಸಿದರು. ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದರೂ ಗಮನಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರಕಾರ ಪ್ರಸಕ್ತ ರೂಪದಲ್ಲೇ ಜಿಎಸ್‌ಟಿ ಅನುಷ್ಠಾನಗೊಳಿಸಿದೆ ಎಂದರು.
ಗುಜರಾತ್‌ನ ಶೇ. 90 ಕಾಲೇಜುಗಳು ದೊಡ್ಡ ಕೈಗಾರಿಕೋದ್ಯಮಿಗಳ ಕೈಯಲ್ಲಿ ಇದೆ. ಅತ್ಯಧಿಕ ಶುಲ್ಕ ದಿಂದಾಗಿ ಬಡವರು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಕೈಗಾರಿಕೋ ದ್ಯಮಿಗಳಿಗೆ ನೀಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.





