ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕುಂದಾಪುರ, ನ.1: ಕುಂದಾಪುರ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯು ಕುಂದಾಪುರದ ಗಾಂಧಿ ಮೈದಾನದಲ್ಲಿ ಬುಧವಾರ ಜರಗಿತು.
ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣವನ್ನು ಕುಂದಾಪುರ ಉಪ ವಿಭಾಗಾಧಿ ಕಾರಿ ಶಿಲ್ಪಾನಾಗ್ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ, ರಾಜ್ಯ ಸರಕಾರ ಕೌಶಲ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಯುವ ಜನತೆಗೆ ಔದ್ಯೋಗಿಕ ಕೌಶಲ್ಯಗಳನ್ನು ಕಲ್ಪಿಸಲಾಗುವುದು. ಹೊರನಾಡ ಕನ್ನಡಿಗರ ಹಿತವನ್ನು ಕಾಪಾಡಲು ಅನಿವಾಸಿ ಭಾರತೀಯ ನೀತಿಯನ್ನು ಸರಕಾರ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ವಹಿಸಿದ್ದರು. ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಮೋಹನ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಪ್ರವೀಣ್ ಕೆ.ನಾಯಕ್, ಕುಂದಾಪುರ ತಹಶೀಲ್ದಾರ್ ಬೋರ್ಕರ್, ವೃತ್ತ ನಿರೀಕ್ಷಕ ಮಂಜಪ್ಪ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಯುವ ಜನ ಸೇವಾಧಿಕಾರಿ ಕುಸುಮಾಕರ ಶೆಟ್ಟಿ ಉಪಸ್ಥಿತರಿದ್ದರು.





