ಮಕ್ಕಳಲ್ಲಿ ಅಪೌಷ್ಠಿಕತೆ: ವಿಶ್ವದಲ್ಲೇ ಭಾರತದಲ್ಲಿ ಅತ್ಯಧಿಕ

ಹೊಸದಿಲ್ಲಿ, ನ.1: ಜಗತ್ತಿನಲ್ಲಿ ಅಪೌಷ್ಠಿಕತೆ ಹೊಂದಿದ ಮಕ್ಕಳಲ್ಲಿ ಅತೀ ಹೆಚ್ಚು ಮಕ್ಕಳು ಭಾರತದಲ್ಲಿ ಇದ್ದಾರೆ. ಆರೋಗ್ಯ ಮತ್ತು ಸಾಮಾಜಿಕ ಅಸಮಾನತೆ ಕಡಿಮೆ ಮಾಡಲು ಭಾರತ ನೀತಿಗಳನ್ನು ರೂಪಿಸುವ ಅಗತ್ಯತೆ ಇದೆ ಎಂದು ಅಸೋಚಾಮ್ ಹಾಗೂ ಇವೈ ಅಧ್ಯಯನ ವರದಿ ಹೇಳಿದೆ.
ಕಳೆದ ಒಂದು ದಶಕದಿಂದ (2005-2015) ಭಾರತದಲ್ಲಿ ನವಜಾತ ಶಿಶುಗಳ ಹಾಗೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದಾಗ್ಯೂ ಅಪೌಷ್ಠಿಕತೆ ಇರುವ ಜಗತ್ತಿನ ಒಟ್ಟು ಮಕ್ಕಳಲ್ಲಿ ಶೇ. 50 ಮಕ್ಕಳು ಭಾರತದಲ್ಲಿ ಇವೆ ಎಂದು ಅಧ್ಯಯನ ವರದಿ ತಿಳಿಸಿದೆ.
2015ರ ಅಂತ್ಯದ ಹೊತ್ತಿಗೆ ಭಾರತದಲ್ಲಿ ಒಂದೆಡೆ ಶೇ. 40 ಮಕ್ಕಳು ಅಪೌಷ್ಠಿಕತೆ ಎದುರಿಸುತ್ತಿದ್ದರು. ಇನ್ನೊಂದೆಡೆ ನಗರ ಜನರು ಹೆಚ್ಚುವರಿ ಪೌಷ್ಠಿಕತೆಯ ಸವಾಲು ಎದುರಿಸುತ್ತಿದ್ದರು ಎಂದು ವರದಿ ಬಹಿರಂಗಗೊಳಿಸಿದೆ.
ಬೊಜ್ಜಿನಲ್ಲಿ ಜಗತ್ತಿನಲ್ಲೇ ಭಾರತ ಮೂರನೇ ಸ್ಥಾನ ಹೊಂದಿದೆ. ಮೊದಲ ಹಾಗೂ ಎರಡನೇ ಸ್ಥಾನವನ್ನು ಕ್ರಮವಾಗಿ ಅಮೆರಿಕ ಹಾಗೂ ಚೀನ ಹೊಂದಿದೆ. ಸಕ್ಕರೆ ಕಾಯಿಲೆಯಲ್ಲಿ ಭಾರತ ಜಗತ್ತಿನ ರಾಜಧಾನಿ. ವಿಶ್ವ ಆರೋಗ್ಯ ಸಂಸ್ಥೆಯ 2015ರ ದತ್ತಾಂಶದ ಪ್ರಕಾರ ಭಾರತದಲ್ಲಿ 69.2 ದಶಲಕ್ಷ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.







