ಅಪರಾಧಿ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ‘ಜೀವಾವಧಿ ನಿಷೇಧ’ ಅಗತ್ಯ: ಚುನಾವಣಾ ಆಯೋಗ

ಹೊಸದಿಲ್ಲಿ, ನ. 1: ಅಪರಾಧಿ ಸಂಸದರು ಹಾಗೂ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಾವಧಿ ನಿಷೇಧ ವಿಧಿಸಬೇಕು ಎಂದು ಭಾರತದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದೇಶದ ರಾಜಕೀಯದಲ್ಲಿ ಹೆಚ್ಚುತ್ತಿರುವ ಅಪರಾಧೀಕರಣವನ್ನು ನಿಗ್ರಹಿಸುವ ಅಗತ್ಯತೆ ಇದೆ. ಜೀವಾವಧಿ ನಿಷೇಧ ಹೇರುವ ನಿಯಮವನ್ನು ಸಂಯೋಜಿಸಲು ಸರಕಾರ ಕಾನೂನಿನಲ್ಲಿ ತಿದ್ದುಪಡಿ ತರಬೇಕು ಎಂದು ಅದು ಹೇಳಿದೆ.
ಚುನಾಯಿತ ಪ್ರತಿನಿಧಿಗಳ ಅನರ್ಹತೆಯ ಅವಧಿಯನ್ನು ಆಯೋಗ ಒಂದು ಬಾರಿ ಅಂದರೆ 1977ರಲ್ಲಿ ಮಾತ್ರ ಇಳಿಸಿತ್ತು ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಂವಿಧಾನದ ವ್ಯಾಪ್ತಿ ಮೀರಿ ಅಪರಾಧಿ ರಾಜಕಾರಣಿಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ 6 ವರ್ಷ ಚುನಾವಣೆ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಿ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ನ್ಯಾಯಮೂರ್ತಿ ರಂಜನ್ ಗಗೋಯ್ ಹಾಗೂ ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು ಹಾಗೂ ಅಪರಾಧ ಪ್ರಕರಣಗಳಲ್ಲಿ ದೋಷಿಗಳಾಗಿರುವ ರಾಜಕೀಯ ವ್ಯಕ್ತಿಗಳ ವಿವರ ನೀಡುವಂತೆ ನಿರ್ದೇಶಿಸಿತು. ಅಪರಾಧಿ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಅಂಕಿ-ಅಂಶ ಒಂದು ಹೊಸ ಆಯಾಮ ನೀಡಲಿದೆ ಎಂದು ಪೀಠ ಹೇಳಿದೆ.







