ಕರ್ತವ್ಯನಿರತ ಅಧಿಕಾರಿಗೆ ಬಿಜೆಪಿ ಮುಖಂಡನಿಂದ ಹಲ್ಲೆ
ಚಪ್ಪಲಿ, ಬೂಟುಗಾಲಿನಿಂದ ಥಳಿಸಿದ ಮುಖಂಡ ಮತ್ತಾತನ ಸಹೋದರ

►ನೀರಿಲ್ಲದ ಸ್ಥಳಕ್ಕೆ ವರ್ಗಾಯಿಸುವ ಬೆದರಿಕೆ
►ರಾಜು ತಲ್ಲೂರು ಸಹಿತ 9 ಮಂದಿಯ ವಿರುದ್ಧ ಪ್ರಕರಣ ದಾಖಲು
ಸೊರಬ, ನ.1: ಕರ್ತವ್ಯ ನಿರತ ದ್ವಿತಿಯ ದರ್ಜೆ ಸಹಾಯಕ ಮತ್ತು ಸಿಬ್ಬಂದಿಗೆ ರಾಜ್ಯ ಬಿಜೆಪಿ ಮುಖಂಡ ಹಾಗೂ ಆತನ ಸಹೋದರ ಬೂಟುಕಾಲಿನಂದ ಒದ್ದು, ಜಾತಿನಿಂದನೆ ಮಾ ಡುವ ಜೊತೆಗೆ ಅವಾಚ್ಯ ಶಬ್ದಗಳಂದ ನಿಂದಿಸಿದ ಘಟನೆ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಘಟನೆಯ ವಿವರ: ಗೋಕಟ್ಟೆ ಕೆರೆ ಏರಿ ಮೇಲೆ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಆನವಟ್ಟಿ-ಹಾನಗಲ್ ರಸ್ತೆಯಲ್ಲಿ ಗ್ರಾಮಸ್ಥರು ಧರಣಿ ನಡೆಸುತ್ತಿದ್ದರು. ಈ ವೆಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ರಾಜು ಎಂ. ತಲ್ಲೂರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಸ್ಥಳಕ್ಕೆ ಆಗಮಿಸಿ ತಮ್ಮ ಅಹವಾಲು ಕೇಳಿ ಮನವಿ ಸ್ವೀಕರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. ಆದರೆ, ಪಿಡಿಒ ಕಾರ್ಯನಿಮಿತ್ತ ಸೊರಬಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಗ್ರಾಪಂನ ದ್ವಿತೀಯ ದರ್ಜೆ ಸಹಾಯಕ ಅಧಿಕಾರಿ ರಾಜಪ್ಪಅಹವಾಲು ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದರು. ಕಾನೂನಿನ ವ್ಯಾಪ್ತಿಯಲ್ಲಿ ಬರುವ ಮಾಹಿತಿ ನೀಡಲು ಅವರು ಮುಂದಾದಾಗ ಮಾತಿನ ಚಕಮಕಿ ಏರ್ಪಟ್ಟು ಗೊಂದಲ ಉಂಟಾಯಿತು.
ಈ ವೇಳೆ ಧರಣಿಯಲ್ಲಿ ಪಾಲ್ಗೊಂಡಿದ್ದ ಆರೋಪಿ ರಾಜು ತಲ್ಲೂರು ಮತ್ತು ಆತನ ಸಹೋದರ ಮುತ್ತೇಶ ದ್ವಿತಿಯ ದರ್ಜೆ ಸಹಾಯಕ ಅಧಿಕಾರಿ ರಾಜಪ್ಪ ಮತ್ತು ಸಿಬ್ಬಂದಿ ಪರಶುರಾಮಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೂಟುಕಾಲಿನಿಂದ ಒದ್ದು, ಚಪ್ಪಲಿಯಲ್ಲಿ ಥಳಿಸಿದ್ದಲ್ಲದೆ ಜಾತಿನಿಂದನೆ ಮಾಡಿದ್ದಾರೆ. ಅಲ್ಲದೆ, ಘಟನೆಗೂ ಮುನ್ನ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ರಾಜು ತಲ್ಲೂರು, ತಮ್ಮ ಭಾಷಣದುದ್ದಕ್ಕೂ ಶಾಸಕರು ಹಾಗೂ ಕೆಲವು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಮನ ಬಂದಂತೆ ಮಾತನಾಡಿದ್ದರು. ಮತ್ತು ಸಂತ್ರಸ್ತ ಅಧಿಕಾರಿಗಳನ್ನು ನೀರು ನೆರಳಿಲ್ಲದೆ ಕಡೆಗೆ ವರ್ಗಾಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.
ಬಿಜೆಪಿ ಮುಂಖಂಡ ರಾಜು ತಲ್ಲೂರು ಮತ್ತು ಆತನ ಸಹೋದರನ ವರ್ತನೆಯಿಮದ ಬೇಸತ್ತ ಧರಣಿ ನಿರತ ಗ್ರಾಮಸ್ಥರಲ್ಲಿ ಅಭಿಪ್ರಾಯ ಭೇದ ಉಂಟಾಗಿ ಕೆಲವರು, ಧರಣಿಯಿಂದ ಹಿಂದಿರುಗಿದ ಘಟನೆಯೂ ನಡೆಯಿತು.
ಈ ಸಂಬಂಧ ಆನವಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೋಮಶೇಖರ್ ಪ್ರಕರಣ ದಾಖಲಿಸಿದ್ದು, ಬಿಜೆಪಿ ಮುಖಂಡ ರಾಜು ತಲ್ಲೂರು, ಸಹೋದರ ಮುತ್ತೇಶ ತಲೂರು, ಬೆಂಬಲಿಗರಾದ ರುದ್ರಗೌಡ ಸಿ. ಪಾಟೀಲ್, ಸಲೀಮುಲ್ಲಾ, ಶುಕ್ರುದ್ದೀನ್, ಮುಹಮ್ಮದ್, ಮುಕಂದರ್, ಮೆಹಬೂಬ್ ಅಲಿ, ಹರ್ಷದ್ ಕೆ.ಎನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 143, 147, 353, 355, 504, 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಿವಾಸಿಗಳು ನಿವೇಶನಗಳನ್ನು ಅಪೇಕ್ಷಿಸಿದರೆ ಗ್ರಾಪಂನಿಂದ ಬೇರೆ ಜಾಗದಲ್ಲಿ ಜಮೀನು ಖರೀದಿಸಿ ನಿವೇಶನ ವಿತರಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಗ್ರಾಪಂ ಅಧಿಕಾರಿ ರಾಜಪ್ಪಅಹವಾಲು ಸ್ವೀಕರಿಸಲು ತೆರಳಿದಾಗ ರಾಜು ತಲ್ಲೂರು ಮತ್ತು ಅವರ ಬೆಂಬಲಿಗರ ವರ್ತನೆ ಖಂಡನೀಯ. ಅಧಿಕಾರಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಶವ ರಾಯ್ಕರ್,ಗ್ರಾಪಂ ಉಪಾಧ್ಯಕ್ಷ
ನಾವು ಕೂಡ ನಿವಾಸಿಗಳ ಪರವಾಗಿ ಧರಣಿಯಲ್ಲಿ ಭಾಗವಹಿಸಿದ್ದೆವು. ಶಾಂತಿಯುತವಾಗಿ ನಡೆಯುತ್ತಿದ್ದ ಧರಣಿಗೆ ಏಕಾಏಕಿ ರಾಜು ತಲ್ಲೂರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ನಂತರ ಸರಕಾರಿ ಅಧಿಕಾರಿ ಅಹವಾಲು ಸ್ವೀಕರಿಸಲು ಬಂದಾಗ ಅಧಿಕಾರಿ ವಿರುದ್ಧ ಗೂಂಡಾವರ್ತನೆ ನಡೆಸಿರುವುದು ಖಂಡನೀಯ.
ರಫೀಕ್ ಅಹ್ಮದ್ ಪಟೇಲ್,ಕಾಂಗ್ರೆಸ್ ಅಲ್ಪಸಂಖ್ಯಾತ ಆನವಟ್ಟಿ ಘಟಕದ ಅಧ್ಯಕ್ಷ
ರಾಜಪ್ಪ ಸ್ಪಷ್ಟನೆ
ಪಿಡಿಒ ಅನುಪಸ್ಥಿತಿಯಲ್ಲಿ ಅಹವಾಲು ಸ್ವೀಕರಿಸಲು ತೆರಳಿದಾಗ ಧರಣಿಯಲ್ಲಿ ಪಾಲ್ಗೊಂಡ ರಾಜು ತಲ್ಲೂರು ಮತ್ತು ಬೆಂಬಲಿಗರು ಏಕಾಏಕಿ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕಾನೂನಿನಲ್ಲಿ ಅವಕಾಶವಿರದ ಬಗ್ಗೆ ಮನವರಿಕೆ ಮಾಡಲು ಹೋದಾಗ ಚಪ್ಪಲಿ ಹಿಡಿದು ಮತ್ತೆ ಹಲ್ಲೆಗೆ ಮುಂದಾದರು ಎಂದು ದ್ವಿತೀಯ ದರ್ಜೆ ಸಹಾಯಕ ರಾಜಪ್ಪ ಹೇಳಿದ್ದಾರೆ.
‘ವರ್ತನೆ ಖಂಡನೀಯ’
ಧರಣಿನಿರತರ ಬೇಡಿಕೆಗಳು ನ್ಯಾಯಯುತವಾದದ್ದೇ. ಆದರೆ ಕಾನೂನಿನಲ್ಲಿನ ತೊಡಕುಗಳನ್ನು ಗಮನಿಸಿ ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ.ಇದರ ಅರಿವಿಲ್ಲದೆ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗುವುದು ಸಭ್ಯತೆಯ ಲಕ್ಷಣವಲ್ಲ. ಜನಪ್ರತಿನಿಧಿಯಾಗುವ ಆಸೆ ಇರುವವರು ಇಂತಹ ವರ್ತನೆಗಳಿಂದ ದೂರವಿರಬೇಕು ಎಂದು ತಾಪಂ ಸದಸ್ಯ ಹನುಮಂತಪ್ಪ ಹೇಳಿದ್ದಾರೆ.
ಇದೊಂದು ಅಮಾನವೀಯ ಘಟನೆ. ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿ ಕದಡುತ್ತವೆ. ಸಂಘ ಇದನ್ನು ತೀರ್ವವಾಗಿ ಖಂಡಿಸುತ್ತದೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳ ಸಂಘ ಒತ್ತಾಯಿಸುತ್ತದೆ.
- ನೀಲಪ್ಪಭೂತಣ್ಣನವರ್, ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ







