ಕನ್ನಡಿಗರು ತಮ್ಮತನವನ್ನು ಪ್ರದರ್ಶಿಸಬೇಕಿದೆ : ಎಸ್.ಪಿ.ಮುದ್ದಹನುಮೇಗೌಡ

ತುಮಕೂರು,ನ.01:ಸುಮಾರು ಎರಡು ಸಾವಿರ ವರ್ಷಗಳ ಪುರಾತನ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಮನೆ, ಮನದಲ್ಲಿ ಬಳಸುವ ಮೂಲಕ ತಮ್ಮತನವನ್ನು ನಾಡಿನ ಎಲ್ಲಾ ಜನರು ಪ್ರದರ್ಶಿಸುವ ಅಗತ್ಯವಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಮಾನಿಕ್ವರೆಯಲ್ಲಿ ನಿರ್ಮಿಸಿರುವ ಗಾಜಿನ ಮನೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ವಿವಿಧ ಸಾಧಕರಿಗೆ ತುಮಕೂರು ಜಿಲ್ಲಾ ಮತ್ತು ತಾಲೂಕು ಮಟ್ಟದ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡುತಿದ್ದ ಅವರು,ಕನ್ನಡ ಭಾಷೆ ಉಳಿಸುವ ಕೆಲಸ ಮನೆಯಿಂದಲೇ ಆರಂಭವಾಗಬೇಕು ಎಂದರು.
ಸ್ವಾತಂತ್ರ ನಂತರದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಆಯಾಯ ಭಾಷೆಯ ಆಧಾರದಲ್ಲಿ ವಿಂಗಡಿಸಿ ಸ್ವಾಯತ್ತತೆಯ ನೀಡಿದ ದಿನವನ್ನು ನಾವು ಕನ್ನಡ ರಾಜೋತ್ಸವವೆಂದು ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆ.ವಿದೇಶಗಳಲ್ಲಿಯೂ ಕನ್ನಡ ರಾಜೋತ್ಸವವನ್ನು ಆಚರಿಸಲಾಗುತ್ತದೆ.ಕನ್ನಡ ರಾಜೋತ್ಸವದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ.ಇದೊಂದು ಹೆಮ್ಮೆಯ ವಿಷಯ ಈ ಬಾರಿಯೂ ಹಲವು ಹಿರಿಯ ಜೀವಗಳ ಜೊತೆ, ಕಿರಿಯರು ಸಹ ಈ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ತಾಲೂಕು ರಾಜೋತ್ಸವ ಪ್ರಶಸ್ತಿ ಪಡೆದ ಮಂಜುಳ ಶ್ರೀಧರ್, ಎಸ್.ಡಿ.ಚಿಕ್ಕಣ್ಣ, ಹನುಮಂತರಾಯಪ್ಪ, ರಾಜೇಂದ್ರಕುಮಾರ್,ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪಡೆದ ಡಾ.ಟಿ.ಎಸ್.ವಿವೇಕಾನಂದ,ಪತ್ರಕರ್ತರಾದ ತಿಪಟೂರು ಕೃಷ್ಣ, ಕುಣಿಗಲ್ ನ ಆನಂದ್‍ಸಿಂಗ್,ಕೊರಟಗೆರೆಯ ಪದ್ಮನಾಭಯ್ಯ,ಸಾ.ಚಿ.ರಾಜಕುಮಾರ್,ಛಾಯಾಗ್ರಾಹಕ ರೇಣಕಪ್ರಸಾದ್,ಸಿ.ಜಯಣ್ಣ ಅವರುಗಳನ್ನು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಇದೇ ಮೊದಲ ಬಾರಿಗೆ ಅಮಾನಿಕೆರೆಯಲ್ಲಿ ನಿರ್ಮಿಸಿರುವ ಎಷ್ಯಾದಲ್ಲಿಯೇ ಮೂರನೇಯದು ಎಂದು ಹೇಳಲಾಗುವ ಗಾಜಿನ ಮನೆಯಲ್ಲಿ ಸಾಂಸ್ಕøತಿಕ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ನಡೆದು, ಕಾರ್ಯಕ್ರಮಕ್ಕೆ ಒಳ್ಳೆಯ ಮೆರಗು ತಂದಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ರಫೀಕ್ ಅಹಮದ್ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್,ತಹಶೀಲ್ದಾರ್ ರಂಗೇಗೌಡ,ಲೀಡ್ ಬ್ಯಾಂಕ್ ಮ್ಯಾನೇಜರ್ ಜೋತಿಗಣೇಶ್,ಶಿರಸ್ತೇದಾರ್ ನರಸಿಂಹರಾಜು,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ ಉಪಸ್ಥಿತರಿದ್ದರು.







