8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನ ನೀಡುವಂತೆ ಕೋರಿ ಪಿಐಎಲ್ ಸಲ್ಲಿಕೆ

ಹೊಸದಿಲ್ಲಿ, ನ. 1: ದೇಶದ 8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.
ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವನಿ ಕುಮಾರ್ ಉಪಾಧ್ಯಾಯ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ.
8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಎಂದು ಸೂಚಿಸಬೇಕು ಹಾಗೂ ಅವರಿಗೆ ನ್ಯಾಯಬದ್ದ ಸವಲತ್ತುಗಳನ್ನು ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಆಗ್ರಹಿಸಿದೆ.
2011ರ ಸಮೀಕ್ಷೆ ಪ್ರಕಾರ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಲಕ್ಷದ್ವೀಪ (ಶೇ. 2.5), ಮೀಝೊರಾಂ (ಶೇ. 2.75), ನಾಗಾಲ್ಯಾಂಡ್ (ಶೇ. 8.75), ಮೇಘಾಲಯ (ಶೇ. 11.53), ಜಮ್ಮು ಹಾಗೂ ಕಾಶ್ಮೀರ (ಶೇ. 28,44), ಅರುಣಾಚಲ ಪ್ರದೇಶ (ಶೇ. 29), ಮಣಿಪುರ (ಶೇ. 31.39) ಹಾಗೂ ಪಂಜಾಬ್ (ಶೇ. 38.40) ಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಎಂದು ಪಿಐಎಲ್ ಹೇಳಿದೆ.
ಈ 8 ರಾಜ್ಯಗಳ ಹಿಂದೂಗಳನ್ನು ಕೇಂದ್ರ ಅಥವಾ ರಾಜ್ಯ ಸರಕಾರಗಳು ಅಲ್ಪಸಂಖ್ಯಾತ ಕಾಯ್ದೆ ಅಡಿಯಲ್ಲಿ ಸೂಚಿಸದೇ ಇರುವುದರಿಂದ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಿಐಎಲ್ ಹೇಳಿದೆ.





