ದರೋಡೆ ಪ್ರಕರಣದ ಆರೋಪಿಗಳ ಬಂಧನ : 15.25 ಲಕ್ಷ ನಗದು ವಶ

ಮಂಡ್ಯ, ನ.1: ಮಳವಳ್ಳಿ ಪಟ್ಟಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳು ಹೊತ್ತೊಯ್ಯುತ್ತಿದ್ದ ಹಣ ಬೆಂಗಳೂರಿನಲ್ಲಿ ದರೋಡೆ ಮಾಡಿದ್ದ ಹಣ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಳವಳ್ಳಿ ಪಟ್ಟಣದಲ್ಲಿ ಅ.31ರಂದು ಬೆಳಗಿನ ಜಾವ ಅನುಮಾನಾಸ್ಪದವಾಗಿ ಹಣದ ಬ್ಯಾಗ್ ಹೊತ್ತು, ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿ ನಿತೀಶ್, ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಬಾಯಿಬಿಟ್ಟಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಾಧಿಕಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಬಾಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್ ಬಳಿ ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಆರೋಪಿ ನಿತೀಶ್ ಮತ್ತೊಬ್ಬ ಆರೋಪಿ ರಾಕೇಶ್ ಜೊತೆ ಸೇರಿ ದರೋಡೆ ನಡೆಸಿದ್ದಾಗಿ ಅವರು ವಿವರಿಸಿದರು.
ಆರೋಪಿ ನಿತೀಶ್ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ವಾಸವಿದ್ದು, ಮೂಲತಃ ಮಳವಳ್ಳಿ ತಾಲೂಕಿನ ಬಾಣಗನಹಳ್ಳಿ ನಿವಾಸಿ. ಹಾಲಿ ಕಾರ್ ಚಾಲಕ. ಮತ್ತೊಬ್ಬ ಆರೋಪಿ ರಾಕೇಶ್ ನಂದಿನಿ ಬಡಾವಣೆಯಲ್ಲಿಯೇ ವಾಸವಾಗಿದ್ದು, ಮೂಲತಃ ನಾಗಮಂಗಲ ತಾಲೂಕು ಬೊಚ್ಚಿಕೊಪ್ಪಲು ನಿವಾಸಿ. ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ.
ಅ.30ರಂದು ದರೋಡೆ ನಡೆಸಿ 31ರಂದು ಮಳವಳ್ಳಿಯಲ್ಲಿ ಸಿಕ್ಕಿಬಿದ್ದಿದ್ದ ನಿತೀಶ್, ಹಣದ ಮೊತ್ತ ಎಷ್ಟು ಹಾಗೂ ಅದರ ಮೂಲ ಯಾವುದು ಎಂಬ ಪೊಲೀಸರ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಿಲ್ಲ. ಆತ ಹಣದ ಮೊತ್ತ ಎಷ್ಟಿದೆ ಎಂಬುದಕ್ಕೆ ನೀಡಿದ ಉತ್ತರ ಹಾಗು ಪೊಲೀಸರು ಎಣಿಸಿದ ನಂತರ ಗೊತ್ತಾದ ಹಣದ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬಂದಾಗ ಪ್ರಕರಣ ಬಯಲಿಗೆ ಬಂತೆಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ದರೋಡೆಗೊಳಗಾದ ಮೊತ್ತ 18,50,000 ರೂ.ಗಳಾಗಿದ್ದು, ಮಳವಳ್ಳಿಯಲ್ಲಿ ಬಂಧಿತರಾದ ಆರೋಪಿಗಳಿಂದ ವಶಪಡಿಸಿಕೊಂಡ ಮೊತ್ತ 15,25,800 ರೂ.ಗಳಾಗಿದೆ. ಮಳವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇತರ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇನ್ಸ್‍ಪೆಕ್ಟರ್ ಎಸ್.ಗಂಗಾಧರ್, ಸಿಬ್ಬಂದಿ ನಿಂಗಣ್ಣ, ಚಲುವಯ್ಯ, ಕೆ.ಎನ್.ಸಿದ್ದರಾಜು, ಅಂಜನಮೂರ್ತಿ, ಎಂ.ಡಿ.ಸತೀಶ್, ಎಸ್.ಡಿ.ಹರ್ಷವರ್ಧನ್, ಭಾನುಪ್ರಕಾಶ್, ಪ್ರಶಾಂತ್ ಕುಮಾರ್, ಸುನಿಲ್‍ಕುಮಾರ್ ಅವರನ್ನು ರಾಧಿಕಾ ಅವರು ಶ್ಲಾಘಿಸಿದರು.







