ನೆಹ್ರಾಗೆ ಗೆಲುವಿನ ಉಡುಗೊರೆ ನೀಡಿದ ಭಾರತ
ನ್ಯೂಝಿಲೆಂಡ್ ವಿರುದ್ಧ 53 ರನ್ ಜಯ

ಹೊಸದಿಲ್ಲಿ, ನ.1: ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಆಕರ್ಷಕ ಅರ್ಧಶತಕ, ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್(2-26) ಹಾಗೂ ಅಕ್ಷರ್ ಪಟೇಲ್(2-20) ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 53 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಭಾರತ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮಾತ್ರವಲ್ಲ ತವರು ಮೈದಾನದಲ್ಲಿ ವಿದಾಯದ ಪಂದ್ಯವನ್ನಾಡಿದ ಹಿರಿಯ ಬೌಲರ್ ಆಶೀಷ್ ನೆಹ್ರಾಗೆ ಕೊಹ್ಲಿ ಪಡೆ ಗೆಲುವಿನ ಉಡುಗೊರೆ ನೀಡಿ ಬೀಳ್ಕೊಟ್ಟಿತು. ನೆಹ್ರಾ ತನ್ನ ಕೊನೆಯ ಪಂದ್ಯದಲ್ಲಿ 4 ಓವರ್‌ಗಳಲ್ಲಿ 29 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದರು.
ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಬುಧವಾರ ಗೆಲುವಿಗೆ 203 ರನ್ ಕಠಿಣ ಸವಾಲು ಪಡೆದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ವಿಕೆಟ್‌ಕೀಪರ್ ಟಾಮ್ ಲಥಾಮ್ 39 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಕೇನ್ ವಿಲಿಯಮ್ಸನ್(28), ಮಿಚೆಲ್ ಸ್ಯಾಂಟ್ನರ್(27), ಸೋಧಿ(ಅಜೇಯ 11) ಹಾಗೂ ಟಾಮ್ ಬ್ರೂಸ್(10) ಎರಡಂಕೆಯ ಸ್ಕೋರ್ ದಾಖಲಿಸಿದರು.
ಭಾರತ 202/3: ಇದಕ್ಕೂ ಮೊದಲು ಟಾಸ್ ಜಯಿಸಿದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮ(80) ಹಾಗೂ ಶಿಖರ್ ಧವನ್(80) ಭರ್ಜರಿ ಅರ್ಧಶತಕದ ಕೊಡುಗೆಯ ಸಹಾಯದಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು.







