ಬೆಳ್ತಂಗಡಿ: ವಾಣಿ ಪ.ಪೂ. ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಬೆಳ್ತಂಗಡಿ, ನ.1: ಇತಿಹಾಸ ಇರುವ ಕನ್ನಡ ಭಾಷೆ ಕೇವಲ ಭಾಷೆಯಾಗಿರದೆ ಸಾಂಸ್ಕೃತಿಕ, ಸಂಸ್ಕಾರವನ್ನು ಉಳಿಸುವ ಭಾಷೆಯಾಗಿದೆ ಎಂದು ಪಟ್ಟಣ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ಹಳೆಕೋಟೆ ವಾಣಿ ಪ.ಪೂ. ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ, ಸಾಹಿತ್ಯ, ಸಾಂಸ್ಕೃತಿಕಗಳ ನಾಡು ಕರ್ನಾಟಕ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಾು ಪ್ರಯತ್ನಿಸಬೇಕು. ಕನ್ನಡ ಭಾಷೆಯ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಇರಬೇಕು. ಮಾತನಾಡಲು ಮುಜುಗರ ಪಡೆದೆ ನಾನು ಕನ್ನಡಿಗ ಎಂಬ ಹೆಮ್ಮೆ ನಮ್ಮಲ್ಲಿರಲಿ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ ಎಂದರು.
ಬೆಳ್ತಂಗಡಿ ಪ್ರಭಾರ ತಹಶೀಲ್ದಾರ್ ಮಹಮ್ಮದ್ ಇಸಾಕ್ ಧ್ವಜಾರೋಹಣಗೈದು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ನಿಡ್ಲೆ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ವಿನಾಯಕ ಜೋಶಿ ಪ್ರಧಾನ ಭಾಷಣ ಮಾಡಿದರು.
ವೇದಿಕೆಯಲ್ಲಿ ತಾಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ನಿವೃತ್ತ ಸೇನಾನಿ ಎಂ. ಆರ್. ಜೈನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ ಕಲಾಮಧು, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತ ಬಂಗೇರ ಇದ್ದರು.
ಕನ್ನಡದಲ್ಲಿ ಅತ್ಯಧಿಕ ಅಂಕ ಗಳಿಸಿದ 43 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಗರ ಪಂಚಾಯಿತಿ ವ್ಯಾಪ್ತಿ ಶಾಲೆಗಳಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಲಕ ಪ್ರಸಾದ್‌ಜೀ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಪಂಚಾಯಿತಿ ಸಂಯೋಜಕ ಜಯಾನಂದ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾದ ಅಥಿತಿಗಳು ಬಹುತೇಕರು ಗೈರು ಹಾಜರಾಗಿದ್ದರು. ಶಾಸಕರು, ತಾಪಂ ಅಧ್ಯಕ್ಷೆ, ತಾಪಂ ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರನ್ನು ಮುದ್ರಿಸಲಾಗಿತ್ತು. ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಧ್ವಜಾರೋಹಣ ಸಂದರ್ಭ ಪೋಲಿಸ್ ಇಲಾಖೆಯಿಂದ ಕವಾಯತ್ ಕೂಡಾ ನಡೆಯಲಿಲ್ಲ. ರಾಷ್ಟ್ರೀಯ ಹಬ್ಬಗಳು ಕೇವಲ ಕಾಟಾಚಾರಕ್ಕೆ ಮಾತ್ರ ನಡೆಸಲಾಗುತ್ತದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.







