ಎಎಜಿ ರಾಜೀನಾಮೆಗೆ ಹರ್ಯಾಣ ಎಜಿ ಆಗ್ರಹ
ಜುನೈದ್ ಹತ್ಯೆ ಪ್ರಕರಣದ ಆರೋಪಿಗಳಿಗೆ ನೆರವು ಆರೋಪ

ಹೊಸದಿಲ್ಲಿ, ಸೆ. 1: ಜುನೈದ್ ಹತ್ಯೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಹರ್ಯಾಣ ಅಡ್ವೊಕೇಟ್ ಜನರಲ್ ಬಲ್‌ದೇವ್ ರಾಜ್ ಮಹಾಜನ್ ಬುಧವಾರ ಹೆಚ್ಚುವರಿ ಅಡ್ವೊಕೇಟ್ ಜನರಲ್ ನವೀನ್ ಕೌಶಿಕ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಜುನೈದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 24 ಹಾಗೂ 25ರಂದು ನಡೆದ ವಿಚಾರಣೆ ವೇಳೆ ಸಾಕ್ಷಿಗಳಿಗೆ ಯಾವೆಲ್ಲ ಪ್ರಶ್ನೆಗಳನ್ನು ಕೇಳಬೇಕು ಎಂದು ಪ್ರಕರಣದ ಆರೋಪಿಯಾಗಿದ್ದ ನರೇಶ್ ಕುಮಾರ್ ವಕೀಲರಿಗೆ ಕೌಶಿಕ್ ಸಲಹೆ ಸೂಚನೆಗಳನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಫರಿದಾಬಾದ್ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ವೈ.ಎಸ್. ರಾಥೋಡ್ ಸರಕಾರಿ ವಕೀಲರಾದ ಕೌಶಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹರ್ಯಾಣ ಸರಕಾರ, ಅಡ್ವೊಕೇಟ್ ಜನರಲ್ ಕಚೇರಿ ಹಾಗೂ ಬಾರ್ ಕೌನ್ಸಿಲ್‌ಗೆ ಸೂಚಿಸಿದ್ದರು.
ಆದರೆ, ಕೌಶಿಕ್ ನ್ಯಾಯಮೂರ್ತಿಗಳಿಗೆ ತನ್ನ ಮೇಲೆ ತಪ್ಪು ಭಾವನೆ ಇದೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ವಕೀಲ ಗೆಳೆಯನಿಗೆ ನೆರವು ಮಾತ್ರ ನೀಡುತ್ತಿದ್ದೇನೆ. ಇನ್ನು ಮುಂದೆ ಈ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.
2014ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರಕಾರದ ಸಮಿತಿ ಆಯ್ಕೆ ಮಾಡಿದ ಮೊದಲ ಹಲವು ನ್ಯಾಯವಾದಿಗಳಲ್ಲಿ ನವೀನ್ ಕೌಶಿಕ್ ಕೂಡ ಒಬ್ಬರು.
ಕೌಶಿಕ್ ಬಾಲ್ಯದಿಂದಲೂ ಆರೆಸ್ಸೆಸ್‌ನೊಂದಿಗೆ ಸಂಪರ್ಕ ಹೊಂದಿದ್ದರು. ಕಳೆದ ಎರಡೂವರೆ ವರ್ಷಗಳಿಂದ ಉತ್ತರ ವಲಯದ ಭಾರತೀಯ ಭಾಷಾ ಅಭಿಯಾನದ ಸಂಘಟನಾ ಕಾರ್ಯದರ್ಶಿ ಯಾಗಿ ಕೌಶಿಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೆಸ್ಸೆಸ್ ಅಧೀನದ ವಕೀಲರ ಸಂಘ ಅಧಿವಕ್ತ್ ಪರಿಷದ್‌ನ ಚಂಡಿಗಢ ಘಟಕದೊಂದಿಗೆ ಕೂಡ ಕೌಶಿಕ್ ಸಂಬಂಧ ಇರಿಸಿಕೊಂಡಿದ್ದಾರೆ.
ದಿಲ್ಲಿ-ಮಥುರಾ ರೈಲಿನಲ್ಲಿ ಕಳೆದ ಜೂನ್‌ನಲ್ಲಿ 16ರ ಹರೆಯದ ಬಾಲಕ ಜುನೈದ್‌ನನ್ನು ಥಳಿಸಿ ಕೊಂದ ಪ್ರಕರಣದ ಆರೋಪಿಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ನವೀನ್ ಕೌಶಿಕ್ ನೆರವು ನೀಡುತ್ತಿದ್ದಾರೆ.
ನ್ಯಾಯಮೂರ್ತಿ ವೈ.ಎಸ್. ರಾಥೋಡ್.







