ಯೋಗೀಶ್ವರ್‌ಗೆ ಡಿ.ಕೆ.ಶಿವಕುಮಾರ್ ಸವಾಲು

ರಾಮನಗರ, ನ.1: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ನನ್ನ ವಿರುದ್ಧ ಯಾವ ದಾಖಲೆ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್‌ನಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಯೋಗೀಶ್ವರ್ ಮಾಡಿದ ಆರೋಪಕ್ಕೆ ಅವರು ಇಂದು ತಿರುಗೇಟು ನೀಡಿದರು.
ನಮ್ಮ ಪಕ್ಷದಲ್ಲಿ ಇದ್ದ ಸಂದರ್ಭದಲ್ಲೂ ನಮ್ಮ ವಿರುದ್ಧ ಬೇರೆಯವರಿಗೆ ದಾಖಲೆಗಳನ್ನು ನೀಡುತ್ತಿದ್ದರು. ಆ ಎಲ್ಲ ವಿಚಾರಗಳು ನಮಗೆ ಗೊತ್ತಿದೆ. ನಮ್ಮೊಂದಿಗೆ ಇದ್ದಾಗ ಅವರಿಗೆ ಉಸಿರೇ ಇರಲಿಲ್ಲ. ಆದರೆ, ಈಗ ಮಾತನಾಡಲು ಆರಂಭಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಕಳೆದ ನಾಲ್ಕು ವರ್ಷದಿಂದ ಯೋಗೀಶ್ವರ್‌ಗೆ ಮೀಟರ್, ಮೋಟರ್ ಎಲ್ಲ ನಿಂತು ಹೋಗಿತ್ತು. ಅವರ ಬಳಿ ಏನೇನು ದಾಖಲೆ ಇದೆಯೋ ತೆಗೆದುಕೊಂಡು ಬರಲಿ. ಅವರಿಗೆ ಎಲ್ಲವನ್ನು ರಿಜಿಸ್ಟ್ರರ್ ಮಾಡಿ ಉಡುಗೊರೆಯಾಗಿ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ಯೋಗೀಶ್ವರ್ ಆಪ್ತರಾದ ಮಲವೇಗೌಡ ಹಾಗೂ ಮುದ್ದುಕೃಷ್ಣ ಎಂಬವರ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಚರ್ಚೆ ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.





