"ಲಿಂಗಾಯತ ಧರ್ಮಕ್ಕೆ ಬೆಂಬಲವಾಗಿ ನಿಲ್ಲಿ, ಸ್ಮರಣೀಯ ವ್ಯಕ್ತಿಯಾಗಿ ಉಳಿಯಿರಿ"
ಶಾಮನೂರುಗೆ ಬಸವರಾಜ ಹೊರಟ್ಟಿ ಪತ್ರ

ಬೆಂಗಳೂರು, ನ.1: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ತನ್ನದೆಯಾದ ಮಹತ್ವವಿದ್ದು, ಮೈಸೂರು ಮಹಾರಾಜರ ಕಾಲದ ಜನಗಣತಿಯಲ್ಲೂ ಲಿಂಗಾಯತ ಧರ್ಮದ ಪ್ರಸ್ತಾಪವಿದೆ. ಹೀಗಾಗಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ತಾವುಗಳು(ಶಾಮನೂರು ಶಿವಶಂಕ್ರಪ್ಪ) ಸಮಾಜದ ಹಿತದೃಷ್ಟಿಯಿಂದ ಲಿಂಗಾಯತ ಎಂದಷ್ಟೆ ನಮೂದಿಸಿ ಸ್ವತಂತ್ರ ಧರ್ಮಕ್ಕೆ ಪ್ರಸ್ತಾಪ ಸಲ್ಲಿಸಬೇಕು, ಯಶಸ್ವಿಯಾದರೆ ತಮ್ಮಂತಹ ಹಿರಿಯರನ್ನು ಭವಿಷ್ಯದ ಇತಿಹಾಸ ಸ್ಮರಿಸುತ್ತದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬುಧವಾರ ಶಾಮನೂರು ಶಿವಶಂಕರಪ್ಪನವರಿಗೆ ಪತ್ರ ಬರೆದಿರುವ ಬಸವರಾಜ ಹೊರಟ್ಟಿ ಅವರು, 1966ರಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಗಜೇಂದ್ರಗಡ್ಕರ್, ಬ್ರಿಟಿಷ್ ಕಾಲದ ಅನೇಕ ಪ್ರವಾಸಿಗರು ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸಿದರೆ, ಮೈಸೂರು ಮಹಾರಾಜರ ಕಾಲದ ಜನಗಣತಿಯಲ್ಲೂ ಲಿಂಗಾಯತ ಧರ್ಮದ ಪ್ರಸ್ತಾಪವಿದೆ. ಹೀಗಾಗಿ, ತಾವುಗಳು(ಶಾಮನೂರು ಶಿವಶಂಕ್ರಪ್ಪ) ಸಮಾಜದ ಹಿತದೃಷ್ಟಿಯಿಂದ ಲಿಂಗಾಯತ ಎಂದಷ್ಟೆ ನಮೂದಿಸಿ ಸ್ವತಂತ್ರ ಧರ್ಮಕ್ಕೆ ಬೆಂಬಲ ನೀಡಿ ಯಶಸ್ವಿಗೊಳಿಸಬೇಕೆಂದು ಹೊರಟ್ಟಿ ಅವರು ಮನವಿ ಮಾಡಿದ್ದಾರೆ.
1904ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ವೀರಶೈವ ಮಹಾಸಭೆ, ವೀರಶೈವ/ಲಿಂಗಾಯತ ಎಂದು ಯಾಕೆ ಆಯಿತು. ಅದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಚರ್ಚೆಯ ವಿಷಯವಾಗಿದೆ. ಲಿಂಗಾಯತರಲ್ಲಿ ಬರುವ ಉಪಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕು ಎನ್ನುವ ಮನವಿಯನ್ನು ವೀರಶೈವ ಹೆಸರಿನಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಒತ್ತಡವನ್ನು ಹೇರಲಾಯಿತು. ಆದರೂ ಅಂದಿನ ಮಹಾರಾಷ್ಟ್ರ ಸರಕಾರ ವೀರಶೈವರನ್ನು ಪರಿಗಣಿಸದೆ ಲಿಂಗಾಯತರನ್ನು ಪುರಸ್ಕರಿಸಿದೆ. ಹೀಗಾಗಿ, ಲಿಂಗಾಯತ ಸಮಾಜದ ಜನ ಸಾಮಾನ್ಯರ ಹಕ್ಕೊತ್ತಾಯದ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಧರ್ಮಕ್ಕೆ ಸಂಬಂಧಿಸಿದ ಮನವಿ ಸಲ್ಲಿಸುವ ಕುರಿತು, ಮುಂದಿನ ತೀರ್ಮಾನ ತಮ್ಮದು ತಮ್ಮಿಂದ ಆಶಾದಾಯಕ ಸ್ಪಂದನೆಯ ನಿರೀಕ್ಷೆ ಲಿಂಗಾಯತ ಸಮಾಜದ್ದಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.







