ವೃದ್ಧನಿಂದ ಅಪ್ರಾಪ್ತ ಬಾಲಕಿಗೆ ಕಿರುಕುಳ ಆರೋಪ: ದೂರು

ಉಳ್ಳಾಲ, ನ.1: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಉಚ್ಚಿಲದ 65ರ ಹರೆಯದ ವೃದ್ಧ ಅಂಗಡಿ ಮಾಲಕನ ವಿರುದ್ಧ ಬಾಲಕಿಯ ಪೋಷಕರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಚ್ಚಿಲ ನಿವಾಸಿ ಅಬ್ದುಲ್ ರಝಾಕ್ (65) ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಉಚ್ಚಿಲದಲ್ಲಿ ದಿನಸಿ ಅಂಗಡಿ ಹೊಂದಿರುವ ಈತ ಬುಧವಾರ ಸಂಜೆ ಅಂಗಡಿಗೆ ಬಂದಿದ್ದ 7ರ ಹರೆಯದ ಬಾಲಕಿಗೆ ಅಂಗಡಿಯೊಳಗಡೆ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಳು. ಇದನ್ನು ಬಾಲಕಿಯ ತಾಯಿ ಮತ್ತು ಅಜ್ಜಿ ಅಂಗಡಿಗೆ ಬಂದು ಪ್ರಶ್ನಿಸಲು ಮುಂದಾದಾಗ ಅಂಗಡಿ ಮಾಲಕ ರಝಾಕ್ ಕೋಪಗೊಂಡಿದ್ದ ಎನ್ನಲಾಗಿದೆ.
ಈ ವಿಷಯ ಪರಿಸರದಲ್ಲಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಎರಡು ಕೋಮಿನ ಜನ ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಆರೋಪಿ ರಝಾಕ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕಾಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಸಹಿತ ಉಳ್ಳಾಲ ಅಪರಾಧ ಹಾಗೂ ಕಾನೂನು ವಿಭಾಗದ ಉಪನಿರೀಕ್ಷಕರು ಜಮಾಯಿಸಿದ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





