ಕನ್ನಡ ರಾಜ್ಯೋತ್ಸವವೆಂದರೆ ಬದ್ಧತೆಯ ಪರಾಮರ್ಶೆ: ಸಿದ್ದರಾಮಯ್ಯ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಂಗಳೂರು, ನ.1: ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮ ಪಡುವುದಕ್ಕೆ ಮಾತ್ರ ಸೀಮಿತವಾಗಬಾರದು. ನಾಡು, ನುಡಿಯ ಕುರಿತು ತಮ್ಮ ಬದ್ಧತೆಯ ಕುರಿತು ಪರಾಮರ್ಶಿಸಿಕೊಳ್ಳಲು ಇದು ಸಕಾಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡಿಗರಾಗಿ ಹುಟ್ಟಿದ ಮೇಲೆ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಲು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಸಾಧಕರೇ ಸಂಪತ್ತು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಇಡೀ ರಾಜ್ಯವೇ ಸಂತೋಷ ಪಡುವ ವಿಚಾರವಾಗಿದೆ. ಸಾಧಕರ ಅವಿರತ ಪರಿಶ್ರಮದಿಂದಾಗಿ ರಾಜ್ಯ ಸರ್ವತೋಮುಖವಾಗಿ ಅಭಿವೃದ್ಧಿಯಾಗಿದೆ. ಅವರ ಹಾದಿಯಲ್ಲಿ ಯುವ ಜನತೆಯು ಸಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ನಾಗಮೋಹನ ದಾಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತಿತರರು ಭಾಗವಹಿಸಿದ್ದರು.
ಕನ್ನಡ ಅನ್ನ ಭಾಷೆಯಾದರೆ ಖಂಡಿತವಾಗಿಯೂ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ. ರಾಜ್ಯದ ಬಹುತೇಕ ಜನತೆ ಇಂಗ್ಲಿಷ್ ಕಡೆಗೆ ವಾಲುತ್ತಿರುವುದು ಪ್ರೀತಿಯಿಂದಲ್ಲ. ಕೇವಲ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಾಗಿ ಮಾತ್ರ. ಹೀಗಾಗಿ ಕನ್ನಡವನ್ನು ಆಡಳಿತ, ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಮುಖ್ಯ ಭಾಷೆಯಾಗಿ ರೂಪಿಸಬೇಕಾಗಿದೆ. ಆಗ ಕನ್ನಡ ತಾನಾಗಿಯೇ ಎಲ್ಲರ ಹೃದಯಗಳಲ್ಲಿ ಪುಟಿಯಲಿದೆ.
-ವೈದೇಹಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ







