ಸರ್ದಾರ್ ಪಟೇಲ್ ಅವರು ನೆಹರೂಗೆ ಬರೆದಿದ್ದ ಪತ್ರದಲ್ಲಿ ಡೋಕ್ಲಾಮ್,ಯುದ್ಧಗಳ ಬಗ್ಗೆ ಭವಿಷ್ಯ ನುಡಿದಿದ್ದರು: ಪಾರಿಕ್ಕರ್

ಪಣಜಿ,ನ.1: ಭಾರತದ ಮೊದಲ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1950ರಲ್ಲಿಯೇ ಚೀನಾ ಮತ್ತು ಪಾಕಿಸ್ತಾನಗಳ ಜೊತೆ ಯುದ್ಧಗಳು ಮತ್ತು ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ನಿಖರ ಭವಿಷ್ಯವನ್ನು ನುಡಿದಿದ್ದರು ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ಇಲ್ಲಿ ಹೇಳಿದರು.
ಪಟೇಲ್ ಅವರ 142ನೇ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪಾರಿಕ್ಕರ್, 2014, ನವಂಬರ್-2017, ಮಾರ್ಚ್ ನಡುವೆ ರಕ್ಷಣಾ ಸಚಿವನಾಗಿದ್ದ ಅವಧಿಯಲ್ಲಿ ಪಟೇಲ್ ಕುರಿತು ವಿವರವಾಗಿ ಓದುವ ಅವಕಾಶ ತನಗೆ ಲಭಿಸಿತ್ತು. ಅವರು 1950ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ಬರೆದಿದ್ದ ಪತ್ರವೊಂದನ್ನು ತಾನು ಓದಿದ್ದೆ. ಪತ್ರದ ವಿಷಯವು ಉತ್ತರದ ಗಡಿಯಲ್ಲಿನ ದೇಶದ ಶತ್ರುಗಳು ಮತ್ತು ವಿರೋಧಿಗಳ ಕುರಿತಾಗಿತ್ತು. 1965ರಲ್ಲಿ ಏನಾಗಲಿದೆ(ಭಾರತ-ಪಾಕಿಸ್ತಾನ ಯುದ್ಧ) ಎನ್ನುವುದನ್ನು, ಚೀನಾದೊಂದಿಗೆ ನಡೆದಿದ್ದ ಯುದ್ಧ(1962)ದ ಭವಿಷ್ಯವನ್ನು ಅವರು ನುಡಿದಿದ್ದರು. ಇತ್ತೀಚಿನ ಡೋಕ್ಲಾಮ್ ಬಿಕ್ಕಟ್ಟಿನ ಕುರಿತೂ ಅವರು ಆಗಲೇ ಹೇಳಿದ್ದರು ಎಂದು ತಿಳಿಸಿದರು.
ಪಟೇಲ್ ಅವರ ದೂರದೃಷ್ಟಿಯನ್ನು ಪ್ರಶಂಸಿಸಿದ ಪಾರಿಕ್ಕರ್, ಅವರು ಭವಿಷ್ಯವನ್ನು ಊಹಿಸುವಲ್ಲಿ ಮತ್ತು ಭಾರತದ ಗಡಿಗಳುದ್ದಕ್ಕೂ ಪರಿಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಅಷ್ಟೊಂದು ನಿಖರತೆ ಮತ್ತು ಪರಿಪೂರ್ಣತೆಯನ್ನು ಹೊಂದಿದ್ದರು ಎಂದರು.
ಕಾಶ್ಮೀರವನ್ನು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, ಪಟೇಲ್ ಅವರ ಅಭಿಪ್ರಾಯ ಗಳನ್ನು ಪರಿಗಣಿಸದಿದ್ದುದು ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದರು.





