ಸಂಸದರ ನಿಧಿಯಿಂದ ರಾಯ್‌ಬರೇಲಿಗೆ 2.5 ಕೋ. ರೂ. ನೀಡಿದ ರೇಖಾ

ಲಕ್ನೋ, ನ. 1: ಬಾಲಿವುಡ್‌ನ ಹಿರಿಯ ನಟಿ ಹಾಗೂ ರಾಜ್ಯ ಸಭಾ ಸದಸ್ಯೆ ರೇಖಾ ತನ್ನ ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಂಸದೀಯ ಕ್ಷೇತ್ರವಾದ ರಾಯ್ ಬರೇಲಿಗೆ 2.5 ಕೋ. ರೂ. ನೀಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ನಿಧಿಯನ್ನು ರಸ್ತೆ ನಿರ್ಮಾಣ ನೀರು ಪೂರೈಕೆ ಹಾಗೂ ಉತ್ತಮ ವಿದ್ಯುತ್ ಪೂರೈಕೆಗೆ ಟ್ರಾನ್ಸ್ ಫಾರ್ಮರ್ ಸ್ಥಾಪಿಸಲು ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರೇಖಾ ಅವರಿಗೆ ಮುಂಜೂರಾಗಿರುವ 1.42 ಕೋಟಿ ರೂಪಾಯಿಯಲ್ಲಿ ಇದುವರೆಗೆ 1.06 ಕೋಟಿ ರೂ. ಸ್ವೀಕರಿಸಲಾಗಿದೆ. ಉಳಿದಿರುವ ಹಣವನ್ನು ಈ ನಿಧಿ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ಸ್ವೀಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸಭಾ ಸಂಸದೆಯೊಬ್ಬರು ತನ್ನ ಕ್ಷೇತ್ರಕ್ಕೆ ನಿಧಿ ನೀಡುವುದರಲ್ಲಿ ಯಾವುದೇ ಅಸ್ವಾಭಾವಿಕತೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟವರ್ತಿ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಯ್‌ಬರೇಲಿಗೆ ಸಂಸದರ ಸ್ಥಳೀಯಾಭಿವೃದ್ಧಿ ನಿಧಿ ನೀಡುವ ಬಗ್ಗೆ ರೇಖಾ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ತನ್ನ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





