ಖಿಚಡಿಗೆ ಭಾರತದ ರಾಷ್ಟ್ರೀಯ ಆಹಾರದ ಪಟ್ಟ?
► ನ.4ರಂದು ಅಧಿಕೃತ ಘೋಷಣೆಯ ನಿರೀಕ್ಷೆ ► ವಿಶ್ವದಾಖಲೆಗಾಗಿ ತಯಾರಾಗಲಿದೆ 800 ಕೆಜಿ ಖಿಚಡಿ

ಹೊಸದಿಲ್ಲಿ,ನ.1: ನಿಸ್ಸಂಶಯವಾಗಿ ಖಿಚಡಿ ಭಾರತದಲ್ಲಿ ಇಷ್ಟದ ಆಹಾರವಾಗಿದೆ. ಶೀಘ್ರವೇ ಅದು ಭಾರತದ ರಾಷ್ಟ್ರೀಯ ಆಹಾರವಾಗಬಹುದು. ಈ ಆಹಾರ ದೇಶಾದ್ಯಂತ ಜನರನ್ನು ಹೇಗೆ ಒಂದಾಗಿಸಿದೆ ಎನ್ನುವುದನ್ನು ತೋರಿಸಲು ಖ್ಯಾತ ಪಾಕಶಾಸ್ತ್ರಜ್ಞ ಸಂಜೀವ ಕಪೂರ್ ಅವರು ನ.4ರಂದು ಇಲ್ಲಿಯ ಇಂಡಿಯಾ ಗೇಟ್‌ನ ಹುಲ್ಲುಹಾಸಿನಲ್ಲಿ 800 ಕೆಜಿ ಖಿಚಡಿಯನ್ನು ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಲು ಪ್ರಯತ್ನಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಹಾರಗಳನ್ನು ಜನಪ್ರಿಯಗೊಳಿಸುವ ಪ್ರಯತ್ನವಾಗಿ ಮತ್ತು ಖ್ಯಾತ ಭಾರತೀಯ ಮತ್ತು ಅಂತರ ರಾಷ್ಟ್ರೀಯ ಕಂಪನಿಗಳಿಗೆ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಹೂಡಿಕೆ ಮತ್ತು ವ್ಯಾಪಾರಕ್ಕೆ ಅವಕಾಶಗಳನ್ನೊದಗಿಸಲು ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವಾಲಯವು ಹಮ್ಮಿಕೊಂಡಿ ರುವ ಮೂರು ದಿನಗಳ ‘ವರ್ಲ್ಡ್ ಫುಡ್ ಇಂಡಿಯಾ’ ಮೇಳದಲ್ಲಿ ಈ ಖಿಚಡಿ ವಿಶ್ವದಾಖಲೆ ಸೃಷ್ಟಿಯ ಯತ್ನ ನಡೆಯಲಿದೆ.
ಗ್ರೇಟ್ ಇಂಡಿಯಾ ಫುಡ್ ಸ್ಟ್ರೀಟ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಕಪೂರ್ ಅವರನ್ನು ನೇಮಿಸಲಾಗಿದೆ. ವಿಶ್ವದಾಖಲೆ ಸೃಷ್ಟಿಯ ತನ್ನ ಪ್ರಯತ್ನದಲ್ಲಿ ಅವರು 1,000 ಲೀ.ಸಾಮರ್ಥ್ಯದ ಮತ್ತು ಏಳು ಅಡಿ ವ್ಯಾಸವಿರುವ ಬೃಹತ್ ಬಾಣಲೆಯನ್ನು ಬಳಸಲಿದ್ದಾರೆ.
ಖಿಚಡಿಯನ್ನು ರಾಷ್ಟ್ರೀಯ ಆಹಾರವನ್ನಾಗಿ ಘೋಷಿಸುವಂತೆ ಆಗ್ರಹವನ್ನೂ ಮಾಡಲಾ ಗಿದ್ದು, ನ.4ರಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಖಿಚಡಿಯನ್ನು ‘ಬ್ರಾಂಡ್ ಇಂಡಿಯಾ ಪುಡ್’ ಎಂದು ಉತ್ತೇಜಿಸಲು ವೇದಿಕೆಯು ಸಜ್ಜುಗೊಂಡಿದೆ. ಬ್ರಾಂಡ್ ಇಂಡಿಯಾಕ್ಕೆ ಅಗತ್ಯ ಸಾಮಗ್ರಿಗಳು ಮತ್ತು ತಯಾರಿಕೆ ವಿಧಾನವನ್ನು ವಿಶ್ವಾದ್ಯಂತವಿರುವ ಭಾರತೀಯ ರಾಯಭಾರಿ ಕಚೇರಿಗಳು ಜನಪ್ರಿಯಗೊಳಿಸಲಿವೆ.
ಭಾರತದ ಅದ್ಭುತ ಆಹಾರವಾಗಿರುವ ಖಿಚಡಿ ಅತ್ಯಂತ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ದೇಶಾದ್ಯಂತ ಜನರು ಬಡವರು ಮತ್ತು ಶ್ರೀಮಂತರು ಎಂಬ ಭೇದವಿಲ್ಲದೆ ಖಿಚಡಿಯನ್ನು ಸೇವಿಸುತ್ತಾರೆ ಎಂದು ಆಹಾರ ಸಂಸ್ಕರಣೆ ಸಚಿವ ಹರಸಿಮ್ರತ್ ಕೌರ್ ಬಾದಲ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಮೇಳದಲ್ಲಿ ತಯಾರಾದ ಖಿಚಡಿಯನ್ನು ಸಾವಿರಾರು ಅನಾಥ ಮಕ್ಕಳಿಗೆ ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತ ಅತಿಥಿಗಳಿಗೆ ವಿತರಿಸಲಾಗುವುದು. ತಯಾರಿಕೆ ವಿಧಾನದೊಂದಿಗೆ ಖಿಚಡಿಯನ್ನು ಭಾರತದಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳ ಮುಖ್ಯಸ್ಥರಿಗೂ ನೀಡಲಾಗುವುದು.







