ಚೇತೇಶ್ವರ ಪೂಜಾರ ಶತಕ: ಸುಸ್ಥಿತಿಯಲ್ಲಿ ಸೌರಾಷ್ಟ್ರ

ರಾಜ್‌ಕೋಟ್, ನ.1:ಚೇತೇಶ್ವರ ಪೂಜಾರ ದಾಖಲಿಸಿದ ಅಜೇಯ ಶತಕದ ಸಹಾಯದಿಂದ ಸೌರಾಷ್ಟ್ರ ತಂಡ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಮೊದಲ ದಿನದಾಟದಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 341 ರನ್ ಗಳಿಸಿದೆ.
ಇಲ್ಲಿನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 42ನೆ ಶತಕ ಸಿಡಿಸಿದರು. ಈ ಮೂಲಕ ಕಳೆದ 10 ಇನಿಂಗ್ಸ್‌ಗಳಲ್ಲಿ ಎದುರಿಸಿದ್ದ ರನ್ ಬರ ನೀಗಿಸಿಕೊಂಡರು.
ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 11ನೆ ಓವರ್‌ನಲ್ಲಿ ಔಟಾದಾಗ ಕ್ರೀಸ್ ಆಕ್ರಮಿಸಿಕೊಂಡ ಪೂಜಾರ 223 ಎಸೆತಗಳಲ್ಲಿ 18 ಬೌಂಡರಿಗಳ ಸಹಿತ ಅಜೇಯ 125 ರನ್ ಗಳಿಸಿದರು. ಸ್ನೆಲ್ ಪಟೇಲ್ ಹಾಗೂ ಶೆಲ್ಡನ್ ಜಾಕ್ಸನ್ ಬೆನ್ನುಬೆನ್ನಿಗೆ ಔಟಾದಾಗ ಸೌರಾಷ್ಟ್ರ 3 ವಿಕೆಟ್‌ಗಳ ನಷ್ಟಕ್ಕೆ 46 ರನ್ ಗಳಿಸಿತು. ಆಗ ಪೂಜಾರ ಹಾಗೂ ರವೀಂದ್ರ ಜಡೇಜ(42)4ನೆ ವಿಕೆಟ್‌ಗೆ 88 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಆಶೀಶ್ ಕುಮಾರ್ ಅವರು ಜಡೇಜ ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಪ್ರೇರಕ್ ಮಂಕಡ್‌ರೊಂದಿಗೆ 5ನೆ ವಿಕೆಟ್‌ಗೆ 137 ರನ್ ಜೊತೆಯಾಟ ನಡೆಸಿದ ಪೂಜಾರ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಪ್ರೇರಕ್ 118 ಎಸೆತಗಳಲ್ಲಿ 85 ರನ್ ಗಳಿಸಿ ವರುಣ್ ಆ್ಯರೊನ್‌ಗೆ ವಿಕೆಟ್ ಒಪ್ಪಿಸಿದರು. ಪೂಜಾರ ಹಾಗೂ ಚಿರಾಗ್ ಜಾನಿ(ಅಜೇಯ 40) 6ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 70 ರನ್ ಸೇರಿಸಿ ತಂಡ ಸ್ಕೋರನ್ನು 300ರ ಗಡಿ ದಾಟಿಸಿದರು.







