ಶಿಕಾರಿಪುರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಶಿಕಾರಿಪುರ,ನ.1 ಅತೀ ಹೆಚ್ಚು ಸುಶಿಕ್ಷಿತರನ್ನು,ಶಿಕ್ಷಕರನ್ನು ಹೊಂದಿರುವ ತಾಲೂಕಿನ ಕಾಗಿನೆಲ್ಲಿ ಗ್ರಾಮ ಕನ್ನಡ ನಾಡು,ನುಡಿ,ಬಾಷೆಯ ಅಭಿವೃದ್ದಿಗೆ ಬಹು ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗೂ ಹಿರಿಯ ಪರ್ತಕರ್ತ ಸಚ್ಚಿದಾನಂದ.ಬಿ ಮಠದ್ ತಿಳಿಸಿದರು.
ಬುಧವಾರ ತಾಲೂಕಿನ ಕಾಗಿನೆಲ್ಲಿ ಗ್ರಾಮದ ದಿ.ಶಂಕರನಾಗ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿಯೇ ಅತಿ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಗ್ರಾಮವಾಗಿ ಕಾಗಿನೆಲ್ಲಿ ಪ್ರಸಿದ್ದವಾಗಿದ್ದು, ಶತಮಾನದಿಂದ ಗ್ರಾಮದ ಸರ್ಕಾರಿ ಮಾದರಿ ಶಾಲೆ ಶೈಕ್ಷಣಿಕವಾಗಿ ಹಲವು ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿದ ಹಿರಿಮೆಯನ್ನು ಹೊಂದಿದೆ ಎಂದ ಅವರು ಗ್ರಾಮದ ಹಲವು ಪ್ರತಿಭಾನ್ವಿತರು ಶಿಕ್ಷಕರಾಗಿ ಸಾರ್ಥಕ ಸೇವೆಯ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.ಗ್ರಾಮದಲ್ಲಿ ಕನ್ನಡ ಜಾಗೃತಿಯ ಕಾರ್ಯಕ್ರಮಗಳು ನಿರಂತರವಾಗಿದ್ದು 70 ರ ದಶಕದಲ್ಲಿ ಕನ್ನಡ ಯುವಕ ಸಂಘದ ಆಶ್ರಯದಲ್ಲಿ ಪುಟ್ಟಣ್ಣ ಕಣಗಾಲ್ ರಂಗ ಮಂದಿರ ನಿರ್ಮಿಸಿ ಗ್ರಾಮಕ್ಕೆ ಕನ್ನಡದ ಪ್ರತಿಭಾನ್ವಿತ ಚಿತ್ರನಟರಿಂದ ಲೋಕಾರ್ಪಣೆಗೊಳಿಸಿದ ಸಂದರ್ಬವನ್ನು ನೆನೆಸಿಕೊಂಡರು.
ಇದೀಗ ದಿ.ಶಂಕರನಾಗ್ ಕನ್ನಡ ಅಭಿಮಾನಿಗಳ ಸಂಘ ಕ್ರಿಯಾಶೀಲ ಚಟುವಟಿಕೆಯ ಮೂಲಕ ಬಾಷೆ ನಾಡು ನುಡಿಯ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿಗಾಗಿ ಶ್ರಮಿಸುತ್ತಿದೆ ಎಂದು ಪ್ರಶಂಸಿಸಿದ ಅವರು ಕನ್ನಡದ ನೆಲ ಜಲ ಬಾಷೆಯ ಬೆಳವಣಿಗೆಗೆ ಧಕ್ಕೆಯಾಗುತ್ತಿರುವ ಸಂದರ್ಬದಲ್ಲಿ ಗ್ರಾಮದಲ್ಲಿ ಯುವಕರ ಕಾರ್ಯ ಪ್ರೇರಣೆಯಾಗಿದೆ.ಕಲೆ ಸಾಹಿತ್ಯ ಸಂಸ್ಕೃತಿಗೆ ಮೂಲ ನೆಲೆಯಾಗಿರುವ ಗ್ರಾಮದಲ್ಲಿನ ಕನ್ನಡಪರ ಚಟುವಟಿಕೆಗಳು ಕನ್ನಡಪರ ಸರ್ವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು
ಅಧ್ಯಕ್ಷತೆಯನ್ನು ವಹಿಸಿದ್ದ ದಿ.ಶಂಕರನಾಗ್ ಕನ್ನಡ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಸತೀಶಯ್ಯ ಮಾತನಾಡಿ,1956 ರ ನ.1 ರಂದು ಮೈಸೂರು ರಾಜ್ಯವಾಗಿ,1973 ರ ನ.1 ರಂದು ಮುಖ್ಯಮಂತ್ರಿ ದೇವರಾಜ ಅರಸು ರವರ ಶ್ರಮದಿಂದ ನಾಮಕರಣಗೊಂಡ ಕರ್ನಾಟಕ ರಾಜ್ಯದಲ್ಲಿ ಇದೀಗ ನೆಲ ಜಲ ಬಾಷೆಯ ಬಗ್ಗೆ ದಬ್ಬಾಳಿಕೆ,ದೌರ್ಜನ್ಯ ಹೆಚ್ಚಾಗುತ್ತಿದ್ದು ಈ ದಿಸೆಯಲ್ಲಿ ನಾಡಿನ ಏಕತೆಗಾಗಿ ಪ್ರತಿಯೊಬ್ಬರೂ ಕಂಕಣಬದ್ದರಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷ ಸಿದ್ದಪ್ಪ,ಸದಸ್ಯೆ ಹೇಮಾವತಿ,ಮುಖ್ಯೋಪಾದ್ಯಾಯ ಎಂ.ಕೆ ಸುರೇಶ್,ರಾಮಾನಾಯ್ಕ, ಮಂಜುನಾಥ,ಮಹೇಶ್ವರಪ್ಪ ಬಂಡಿಬೈರನಹಳ್ಳಿ,ಈಶ್ವರಪ್ಪ,ಸಂಘದ ಅಧ್ಯಕ್ಷ ನಾಗರಾಜ್,ರಮೇಶ್, ಚೇತನ್‌ಕುಮಾರ್,ಒದೇಗೌಡ, ಹರೀಶ್,ನಾಗರಾಜಾಚಾರಿ,ಗಜೇಂದ್ರ,ಚಂದ್ರಪ್ಪ,ಉಮೇಶ್,ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಭುವನೇಶ್ವರಿ ದೇವಿಯ ಸಂಭ್ರಮದ ಮೆರವಣಿಗೆ ನಡೆಯಿತು.ದ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷೆ ಸರೋಜಮ್ಮ ನೆರವೇರಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಾಗರಾಜ್ ಸ್ವಾಗತಿಸಿ,ನಿರೂಪಿಸಿ,ಮಾಲತೇಶ ವಂದಿಸಿದರು.







