ಭಾಷೆಯ ಹೆಸರಿನಲ್ಲಿ ದ್ವೇಷ ಬೇಡ: ಪ್ರೊ. ಬಿ.ಎಂ. ಹೆಗ್ಡೆ
ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂದೇಶ

ಮಂಗಳೂರು, ನ.1: ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಭರದಲ್ಲಿ ಮನುಷ್ಯರನ್ನು ದ್ವೇಷಿಸಬಾರದು ಎಂದು ವಿಶ್ರಾಂತ ಕುಲಪತಿ ಪ್ರೊ. ಬಿ.ಎಂ. ಹೆಗ್ಡೆ ಹೇಳಿದರು.
ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ನಗರದ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.
ಇಂದು ಕನ್ನಡಿಗರು ತುಂಬಾ ಕುಶಿಯಿಂದಿರಬಹುದು. ಆದರೆ, ನನಗೆ ಸ್ವಲ್ಪ ಬೇಸರವೂ ಇದೆ. ಯಾಕೆಂದರೆ ಕೆಲವು ಮಂದಿ ಮಾತೃಭಾಷೆಯನ್ನು ಪ್ರೀತಿಸುವ ಭರದಲ್ಲಿ ಇತರ ಭಾಷಿಗರನ್ನು ದ್ವೇಷಿಸುತ್ತಾರೆ. ಕನ್ನಡಿಗರು, ತುಳುವರು, ತಮಿಳರು ಎಂದು ಹೊಡೆದಾಡುವ ಬದಲು ನಾವೆಲ್ಲ ಮನುಷ್ಯರು ಎಂಬ ಪ್ರಜ್ಞೆ ನಮ್ಮಲ್ಲಿರಬೇಕು ಎಂದು ಪ್ರೊ.ಬಿ.ಎಂ.ಹೆಗ್ಡೆ ನುಡಿದರು.
ಭಾಷೆಯ ಹೆಸರಿನಲ್ಲಿ ಮನುಷ್ಯರ ನಡುವಿನ ಐಕ್ಯತೆಯನ್ನು ಮುರಿಯುವ ಅಗತ್ಯವಿಲ್ಲ. ಪ್ರದೇಶವನ್ನು ತುಂಡು ಮಾಡುವ ಧಾವಂತವೂ ಬೇಡ. ರಾಜ್ಯೋತ್ಸವದ ಸಂದರ್ಭ ಕೆಲವರು ತುಳುನಾಡಿನ ಹೆಸರಿನಲ್ಲಿ ಕನ್ನಡವನ್ನು ದ್ವೇಷಿಸುವ ಮಟ್ಟಕ್ಕೂ ಹೋಗುತ್ತಾರೆ. ಇದು ಸರಿಯಲ್ಲ. ಜಗತ್ತಿನಲ್ಲೇ ಕನ್ನಡವು ಅತ್ಯಂತ ಪ್ರಾಚೀನವಾದ ಮೂರನೆಯ ಭಾಷೆ ಎಂಬ ಹೆಗ್ಗಳಿಕೆ ಇದೆ. ಹೀಗಿರುವಾಗ ಇತರ ಭಾಷಿಗರನ್ನು ಸಂಶಯದೃಷ್ಟಿಯಿಂದ ನೋಡಬಾರದು ಎಂದು ಪ್ರೊ. ಬಿ.ಎಂ. ಹೆಗ್ಡೆ ಹೇಳಿದರು.
ಕಾರ್ಯಕ್ರಮದಲ್ಲಿ ಹೊರ ರಾಜ್ಯದಲ್ಲಿ ನೆಲೆಸಿರುವ 23 ಕನ್ನಡಿಗ ಬಾಲಪ್ರತಿಭಾವಂತರು ಮತ್ತು 12 ಮಂದಿ ಸ್ಥಳೀಯ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಡಿಡಿಪಿಐ ಶಿವರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಮತ್ತಿತರರು ಉಪಸ್ಥಿತರಿದ್ದರು.







