ಮೊದಲ ದಿನವೇ ಮಹಾರಾಷ್ಟ್ರ ಆಲೌಟ್
ವಿನಯಕುಮಾರ್‌ಗೆ ಆರು ವಿಕೆಟ್: ಕರ್ನಾಟಕ ಬಿಗಿ ಹಿಡಿತ

ಪುಣೆ, ನ.1: ನಾಯಕ ವಿನಯಕುಮಾರ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಬುಧವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಮಹಾರಾಷ್ಟ್ರ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡ ಮಹಾರಾಷ್ಟ್ರವನ್ನು ಬ್ಯಾಟಿಂಗ್‌ಗೆ ಇಳಿಸಿತು.
‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ವಿನಯಕುಮಾರ್ ದಾಳಿಗೆ ತತ್ತರಿಸಿದ ಮಹಾರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 245 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 117 ರನ್ ಗಳಿಸಿದೆ. ಮಾಯಾಂಕ್ ಅಗರವಾಲ್(ಅಜೇಯ 50, 94 ಎಸೆತ, 6 ಬೌಂಡರಿ) ಹಾಗೂ ಆರ್.ಸಮರ್ಥ್(ಅಜೇಯ 47, 93 ಎಸೆತ,6 ಬೌಂಡರಿ ) ಪ್ರತಿ ಓವರ್‌ಗೆ 4 ರನ್ ಸರಾಸರಿಯಲ್ಲಿ ರನ್ ಕಲೆ ಹಾಕಿ ಭದ್ರಬುನಾದಿ ಹಾಕಿಕೊಟ್ಟಿದ್ದಾರೆ.
ಮಹಾರಾಷ್ಟ್ರ 13ನೆ ಓವರ್‌ನಲ್ಲಿ 28 ರನ್‌ಗೆ ಅಗ್ರ ಐದು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಅತ್ಯಂತ ಕಳಪೆ ಆರಂಭ ಪಡೆದಿತ್ತು. ಆಗ 6ನೆ ವಿಕೆಟ್‌ಗೆ 147 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ನೌಶಾದ್ ಶೇಖ್ ಹಾಗೂ ರಾಹುಲ್ ತ್ರಿಪಾಠಿ ತಂಡಕ್ಕೆ ಆಸರೆಯಾದರು.
ಮಹಾರಾಷ್ಟ್ರದ ಪರ ಏಳನೆ ಕ್ರಮಾಂಕದ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಶತಕ(120 ರನ್, 114 ಎಸೆತ, 13 ಬೌಂಡರಿ, 3 ಸಿಕ್ಸರ್) ಹಾಗೂ ನೌಶಾದ್ ಶೇಖ್(69 ರನ್, 105 ಎಸೆತ, 10 ಬೌಂಡರಿ) ಅರ್ಧಶತಕದ ಕೊಡುಗೆ ನೀಡಿ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು.
ನೌಶಾದ್ ಔಟಾದ ಬಳಿಕ ರಾಹುಲ್‌ಗೆ ಮತ್ತೊಂದು ತುದಿಯಿಂದ ಸರಿಯಾದ ಸಾಥ್ ಸಿಗಲಿಲ್ಲ. ಉತ್ತರಪ್ರದೇಶದ ವಿರುದ್ಧ ಪಂದ್ಯದಲ್ಲಿ ಕೇವಲ 9 ರನ್‌ನಿಂದ ಶತಕ ವಂಚಿತರಾಗಿದ್ದ ತ್ರಿಪಾಠಿ ಕರ್ನಾಟಕದ ವಿರುದ್ಧ ನಾಲ್ಕನೆ ಪ್ರಥಮದರ್ಜೆ ಶತಕ ಬಾರಿಸಿದರು. ಮಹಾರಾಷ್ಟ್ರ 226 ರನ್ ಗಳಿಸಿದ್ದಾಗ ತ್ರಿಪಾಠಿಯ ಏಕಾಂಗಿ ಹೋರಾಟಕ್ಕೆ ಸ್ಟುವರ್ಟ್ ಬಿನ್ನಿ ತೆರೆ ಎಳೆದರು.
ಸಂಕ್ಷಿಪ್ತ ಸ್ಕೋರ್
►ಮಹಾರಾಷ್ಟ್ರ ಮೊದಲ ಇನಿಂಗ್ಸ್: 55 ಓವರ್‌ಗಳಲ್ಲಿ 245/10
(ರಾಹುಲ್ ತ್ರಿಪಾಠಿ 120, ನೌಶಾದ್ ಶೇಖ್ 69,ವಿನಯಕುಮಾರ್ 6-59,ಪವನ್ ದೇಶಪಾಂಡೆ 2-39)
►ಕರ್ನಾಟಕ ಮೊದಲ ಇನಿಂಗ್ಸ್: 31 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 117
(ಮಾಯಾಂಕ್ ಅಗರವಾಲ್ ಅಜೇಯ 50, ಆರ್.ಸಮರ್ಥ್ ಅಜೇಯ 47, ಇತರ 20)







