ತುಳುನಾಡಿಗೆ ಅನ್ಯಾಯ ಖಂಡಿಸಿ ತುರವೇ ಪ್ರತಿಭಟನೆ

ಮಂಗಳೂರು, ನ.1: ತುಳುನಾಡಿನ ಅಭಿವೃದ್ಧಿ ಮತ್ತು ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆಯ ಸದಸ್ಯರು ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸಬೇಕು, ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು, ಕೇಂದ್ರ ಸರಕಾರವು ತುಳುನಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ರಾಜ್ಯ ಸರಕಾರವು ತುಳುಭಾಷಾ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ತುಳು ಸಿನೆಮಾ ನಿಗಮ ರಚಿಸಬೇಕು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು, ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಿಸಬೇಕು ಇತ್ಯಾದಿ ಬೇಡಿಕೆಯನ್ನು ಈ ಸಂದರ್ಭ ಮುಂದಿಡಲಾಯಿತು.
ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಕರ್ನಾಟಕದ ಏಕೀಕರಣ ಸಂದರ್ಭ ತುಳುನಾಡಿಗೆ ಅನ್ಯಾಯವಾಗಿದೆ. ತುಳುನಾಡಿನ ಒಂದು ಭಾಗವು ಕೇರಳಕ್ಕೆ ಸೇರಿದ್ದು, ಅದನ್ನು ಮರಳಿ ಪಡೆಯಲು ಸರಕಾರ ಆಸಕ್ತಿ ವಹಿಸುತ್ತಿಲ್ಲ. ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೂ ಸೇರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುರವೇ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಜೆಪ್ಪು, ಅಝರುದ್ದೀನ್, ಜುನೈದ್, ರಮೇಶ್ ಪೂಜಾರಿ, ಜ್ಯೋತಿಕಾ ಜೈನ್. ಹರೀಶ್ ಶೆಟ್ಟಿ, ರೇಶ್ಮಾ, ಕುಮಾರ್, ಶಾರದಾ ಕಡಿಯಾಳಿ, ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು.







