ಐದನೆ ಪಂದ್ಯದಲ್ಲಿ ನಾಲ್ಕನೆ ಬಾರಿ ಶತಕ ಸಿಡಿಸಿದ ಪೃಥ್ವಿ ಶಾ

ಮುಂಬೈ, ನ.1: ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಮುಂಬೈ ತಂಡದ 17ರ ಹರೆಯದ ಬ್ಯಾಟ್ಸ್‌ಮನ್ ಪೃಥ್ವಿ ಶಾ ಭುವನೇಶ್ವರದಲ್ಲಿ ಬುಧವಾರ ಆರಂಭವಾದ ಒಡಿಶಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಶಾ ತಾನಾಡಿರುವ 5ನೆ ಪ್ರಥಮ ದರ್ಜೆ ಪಂದ್ಯದಲ್ಲಿ ನಾಲ್ಕನೆ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಲೆಜೆಂಡರಿ ಸಚಿನ್ ತೆಂಡುಲ್ಕರ್ ಮಾತ್ರ 18 ವರ್ಷಕ್ಕಿಂತ ಮೊದಲೇ ಗರಿಷ್ಠ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಒಡಿಶಾ ವಿರುದ್ಧ 105 ರನ್(153 ಎಸೆತ,18 ಬೌಂಡರಿ) ಗಳಿಸಿದ ಶಾ ಇನಿಂಗ್ಸ್‌ನುದ್ದಕ್ಕೂ 68.63ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 44ನೆ ಓವರ್‌ನಲ್ಲಿ ಬಸಂತ್ ಮೊಹಾಂತಿಗೆ ವಿಕೆಟ್ ಒಪ್ಪಿಸಿದರು. ಶಾ ಸಾಹಸದ ಹೊರತಾಗಿಯೂ ಮುಂಬೈ ತಂಡ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 264 ರನ್ ಗಳಿಸಿದೆ. ನಾಯಕ ಆದಿತ್ಯ ತಾರೆ ಅಜೇಯ 28 ರನ್ ಗಳಿಸಿದ್ದಾರೆ.
ಶಾ ವೃತ್ತಿಜೀವನದ ಆರಂಭದಲ್ಲೇ ಎಲ್ಲರ ಗಮನ ತನ್ನತ್ತ ಸೆಳೆದಿದ್ದರು.ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದ ಶಾ ದುಲೀಪ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ಪರ 66 ರನ್ ಗಳಿಸಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಶ್ಲಾಘನೆಗೆ ಒಳಗಾಗಿದ್ದರು.
ಶಾ ಭಾರತದ ಅಂಡರ್-19 ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಿ ವಾಪಸಾದ ಬಳಿಕ ಬಿಸಿಸಿಐ ಶಾ ಅವರನ್ನು ಏಷ್ಯಾಕಪ್‌ನ ಅಂಡರ್-19 ತಂಡದ ಹೊರಗಿಟ್ಟು ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಅವಕಾಶ ನೀಡಿದ್ದರು. ಆಯ್ಕೆಗಾರರ ಈ ನಿರ್ಧಾರ ಇದೀಗ ಫಲ ನೀಡುತ್ತಿದೆ.







