ನಮ್ಮ ಭಾಷೆಯನ್ನು ಉಳಿಸಿ ಬೆಳಸಲು ಪತ್ರಿಯೊಬ್ಬ ಕನ್ನಡಿಗನು ಪಣತೊಡಬೇಕು: ದತ್ತ

ಕಡೂರು, ನ.1:ನಮ್ಮ ಭಾಷೆಯನ್ನು ಉಳಿಸಿ ಬೆಳಸಲು ಪತ್ರಿಯೊಬ್ಬ ಕನ್ನಡಿಗನು ಪಣತೊಡಬೇಕು ಎಂದು ಶಾಸಕ ವೈ.ಎಸ್.ವಿ. ದತ್ತ ಕರೆ ನೀಡಿದರು.
ಅವರು ಬುಧವಾರ ಪಟ್ಟಣದ ತಾಲ್ಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ, ಗ್ರಾಮೀಣ ಭಾಗದ ರೈತ ಸಮುದಾಯಗಳು, ಜನಪದರು ಇಂದಿಗೂ ಕನ್ನಡವನ್ನುಳಿಸಿದ್ದಾರೆ. ಹಲವು ಭಾಷೆಗಳು ಜೀವನಾವಶ್ಯಕವಾಗಿವೆ. ಅದರಂತೆ ಕನ್ನಡ ನಮ್ಮ ಮನದ ಮನೆಯ ಭಾಷೆಯಾಗಬೇಕು ಎಂದರು.
ಕನ್ನಡ ಭಾಷೆ ಉಳಿಯಬೇಕಾದರೆ ನಾವು ಮೊದಲು ಅದನ್ನು ಬಳಸಲು ಕಲಿಯಬೇಕು. ಪಟ್ಟಣ ಪ್ರದೇಶಗಳಲ್ಲಿ ಪರಭಾಷಾ ವ್ಯಾಮೋಹ ಕನ್ನಡವನ್ನು ಮರೆಮಾಡುತ್ತಿರುವುದು ವಿಪರ್ಯಾಸ ಎಂದು ವಿಷಾಧಿಸಿದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಎಂ.ಭಾಗ್ಯ, ಹಲವಾರು ಜನರ ತ್ಯಾಗ ಬಲಿದಾನಗಳಿಂದ ನಮ್ಮ ಕನ್ನಡ ನಾಡು ಉದಯವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ನಾಡು ನಮ್ಮದು. ಸರ್ವ ಜನಾಂಗದ ಶಾಂತಿಯ ತೋಟವೂ ಇದೆ. ಎಲ್ಲ ಭಾಷಿಕರನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಯಾವಾಗಲೂ ಮೆರೆಯುತ್ತಿರಬೇಕು. ನಮ್ಮ ಮಕ್ಕಳಿಗೆ ನಮ್ಮ ಕನ್ನಡ ಸಂಸ್ಕøತಿ, ಭಾಷೆ,ನೆಲ, ಜಲದ ಬಗ್ಗೆ, ಸಾಹಿತ್ಯ ಕಾವ್ಯಗಳ ಬಗ್ಗೆ ಪೋಷಕರು ಅರಿವು ಮೂಡಿಸಿ ಕನ್ನಡ ಭಾಷೆಯ ಏಳಿಗಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿವಿಧ ಶಾಲೆಯ ಮಕ್ಕಳಿಂದ ನಾಡು ನುಡಿಯ ಬಗೆಗಿನ ನೃತ್ಯ ಪ್ರದರ್ಶನ ನಡೆಸಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್, ವೃತ್ತ ನಿರೀಕ್ಷಕ ಕೆ.ಸತ್ಯನಾರಾಯಣ್, ಪಿಎಸ್‍ಐ ಸಿ.ರಾಕೇಶ್, ಉಪತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲ್ಲೂಕು ಕಸಾಪ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್, ಜಿಲ್ಲಾ ಸಂಚಾಲಕ ಕೆ.ಜಿ.ಶ್ರೀನಿವಾಸ್ ಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಡಾ,ಪ್ರಭು ಮತ್ತಿತರರಿದ್ದರು.
ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್, ಅರಣ್ಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಬಿಟ್ಟರೆ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳು ಬಾರದೆ ಇದ್ದುದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.







