ದಾವಣಗೆರೆ : ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ,ನ.1:ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ಸಾಹಿತಿಗಳು, ಕಲಾವಿದರು ನಿರಂತರ ಹೋರಾಟ ನಡೆಸಿದ್ದಾರೆ. ಹೋರಾಡಿದ ಎಲ್ಲರನ್ನೂ ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜ್ಯೋತ್ಸವ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಮಂಗಳವಾರ ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 62ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡುತ್ತಾ ಅವರು ಮಾತನಾಡಿದರು.
ಕನ್ನಡ, ಕನ್ನಡಿಗರ ಏಳಿಗೆಗಾಗಿ ಡಾ. ಸರೋಜಿನಿ ಮಹಿಷಿ ವರದಿ ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಇದರಿಂದ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಪಾಲು ಕನ್ನಡಿಗರಿಗೆ ದೊರೆಯಲಿವೆ. ನಮ್ಮದು ಬಹುತ್ವದ ವ್ಯವಸ್ಥೆ. ಇಲ್ಲಿ ಬಹು ಭಾಷೆ, ಬಹು ಸಂಸ್ಕೃತಿ ಮತ್ತು ಬಹು ಮಾದರಿ ಜನಾಂಗಗಳಿವೆ. ಈ ಎಲ್ಲಾ ಸಮುದಾಯಗಳು ಸಾಮುದಾಯಿಕ ಅನನ್ಯತೆ ಉಳಿಸಿಕೊಂಡೆ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆ ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿವೆ ಎಂದ ಅವರು, 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಈ ಬಾರಿ ದಾವಣಗೆರೆ ಆಯ್ಕೆ ಮಾಡಿರುವುದು ಸಂತಸ. ನಾವೆಲ್ಲರೂ ವಿಶ್ವ ಕನ್ನಡ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸೋಣ. ಅದಕ್ಕೆ ತಮ್ಮೆಲ್ಲರ ಸಂಪೂರ್ಣ ಸಹಕಾರ ಕೋರುತ್ತೇನೆ ಎಂದು ಹೇಳಿದರು.
ಜಗತ್ತಿನ ಜ್ಞಾನ ವಿಜ್ಞಾನ ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ. ಆದರೆ, ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ. ವಿಜ್ಞಾನ, ತಂತ್ರಜ್ಞಾನ, ಖಗೋಳಶಾಸ್ತ್ರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಮಾತೃಭಾಷೆ ಕನ್ನಡದಲ್ಲಿ ಪುಸ್ತಕಗಳ ಕೊರತೆಯಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಶಾಲೆಗಳಿಗೆ ಅವುಗಳ ಅವಶ್ಯಕತೆ ಹೆಚ್ಚಾಗಿದ್ದು, ಸಾಹಿತಿಗಳು, ಬರಹಗಾರರು ಆ ನಿಟ್ಟಿನಲ್ಲಿ ಶ್ರಮಿಸಲು ಕೋರುತ್ತೇನೆ.
ನಮ್ಮ ಸರ್ಕಾರ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ, ಸಿಬಿಎಸ್‍ಸಿ, ಐಸಿಎಸ್‍ಇ ಶಾಲೆಗಳಲ್ಲಿ ಕನ್ನಡ ಭಾಷೆ ಪ್ರಥಮ ಮತ್ತು ದ್ವಿತೀಯ ಭಾಷೆಯನ್ನಾಗಿ ಕಲಿಕೆಗೆ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಎಂದರು.
ಮಹಾನಗರಪಾಲಿಕೆ ವತಿಯಿಂದ ಭುವನೇಶ್ವರಿ ಮಾತೆ, ಆರೋಗ್ಯ ಇಲಾಖೆಯಿಂದ ತಾಯಿ ಎದೆ ಹಾಲು ಅಮೃತಕ್ಕೆ ಸಮಾನವೆಂಬ ಸ್ಥಬ್ಧಚಿತ್ರ, ಗೋಲ್ಡನ್ ಪಬ್ಲಿಕ್ ಶಾಲೆ ಕನ್ನಡ ವೀರರ-ವೀರ ನಾರಿಯರ, ಜೈನ್ ಶಾಲೆ ಐಹೊಳೆ ದುರ್ಗಾ ದೇವಾಲಯ, ಸಿದ್ದೇಶ್ವರ ಆಂಗ್ಲಮಾಧ್ಯಮ ಕನ್ನಡ ಜ್ಞಾನಪೀಠ ವಿಜೇತರ ವೇಷಧಾರಿಗಳಾಗಿ ಹಾಗೂ ಕರವೇ ವತಿಯಿಂದ ಕನ್ನಡಕ್ಕಾಗಿ ಹೋರಾಡಿದ ದಿಗ್ಗಜರ ಸ್ತಬ್ಧಚಿತ್ರ. ಶಿವಾನಿ ಮಹಿಳಾವೀರಗಾಸೆ ತಂಡದಿಂದ ವೀರಗಾಸೆ, ರೇವಣಸಿದ್ದಪ್ಪ ತಂಡದಿಂದ ಡೊಳ್ಳುಕುಣಿತ ಪ್ರದರ್ಶಿಸಿದರು.
ಕನ್ನಡ ನಾಡು-ನುಡಿ-ಸಂಸ್ಕøತಿ ಗರಿಮೆ ಸಾರುವ ನೃತ್ಯರೂಪಕ ಗೋಲ್ಡನ್ ಪಬ್ಲಿಕ್ ಶಾಲೆ, ತರಳಬಾಳು ಪ್ರೌಢಶಾಲೆ, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಮತ್ತು ನಿಂಚನ ಪ್ರೌಢಶಾಲಾ ಮಕ್ಕಳು ಕನ್ನಡದ ಉಳಿವಿಗಾಗಿ ಹೋರಾಡಿದ ವೀರರು-ಧೀರರು, ಸಾಹಿತಿಗಳು, ನಟರು, ಕನ್ನಡದ ಹಿರಿಮೆ-ಗರಿಮೆ ಸಾರುವ ಪರಿಕಲ್ಪನೆಗಳೊಂದಿಗೆ ಪ್ರಸ್ತುತಪಡಿಸಿದರು.
ಪ್ರಧಾನ ಕವಾಯತು ನಾಯಕ ಕಿರಣ್‍ಕುಮಾರ್ ಸಾರಥ್ಯದಲ್ಲಿ ಪುರುಷ, ಮಹಿಳಾ ಪೊಲಿಸ್ ತಂಡ, ಗೃಹರಕ್ಷಕ ದಳ, ಅಗ್ನಿಶಾಮಕದಳ, ಅಬಕಾರಿ ದಳ, ಸೇಂಟ್ ಪಾಲ್ಸ್ ಎನ್‍ಸಿಸಿ ಮಹಿಳಾ ತಂಡ, ಬಿ.ಎಂ. ತಿಪ್ಪೇಸ್ವಾಮಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 16 ತಂಡಗಳು ಕನ್ನಡ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು.
ಪಥ ಸಂಚಲನದಲ್ಲಿ ಅಗ್ನಿಶಾಮಕ ದಳ ಪ್ರಥಮ, ಗೃಹ ರಕ್ಷಕ ದಳ ದ್ವಿತೀಯ ಮತ್ತು ಅಬಕಾರಿ ದಳ ತೃತೀಯ ಹಾಗೂ ಎನ್‍ಸಿಸಿ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಥಮ,ಸೇಂಟ್ ಪಾಲ್ಸ್ ಮಹಿಳಾ ತಂಡ ದ್ವಿತೀಯ ಹಾಗೂ ಬಿ.ಎಂ. ತಿಪ್ಪೇಸ್ವಾಮಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡವು.
ಸ್ಥಬ್ದಚಿತ್ರ ಪ್ರದರ್ಶನದಲ್ಲಿ ಶಾಲಾ ವಿಭಾಗದಲ್ಲಿ ಜೈನ್ ಪಬ್ಲಿಕ್ ಸ್ಕೂಲ್ ಪ್ರಥಮ, ಗೋಲ್ಡನ್ ಪಬ್ಲಿಕ್ ಸ್ಕೂಲ್ ದ್ವಿತೀಯ ಆಕ್ಸ್‍ಫರ್ಡ್ ಶಾಲೆ ತೃತೀಯ, ಇಲಾಖೆಗಳ ಸ್ಥಬ್ದಚಿತ್ರ ವಿಭಾಗದಲ್ಲಿ ಆರೋಗ್ಯ ಇಲಾಖೆ ಪ್ರಥಮ, ಕೆಎಸ್‍ಆರ್‍ಟಿಸಿ ವೀರೇಶ್, ಚಾಲಕರು ದ್ವಿತೀಯ, ಮಹಾನಗರ ಪಾಲಿಕೆ ತೃತೀಯ ಹಾಗೂ ಸಂಘ ಸಂಸ್ಥೆಗಳ ಸ್ಥಬ್ದಚಿತ್ರ ವಿಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರಥಮ, ಶಿವಕುಮಾರ್ ಮಹಡಿ (ರಕ್ತದಾನ) ದ್ವಿತೀಯ ಬಹುಮಾನ ಪಡೆದುಕೊಂಡರು.
ಮೇಯರ್ ಅನಿತಾಬಾಯಿ ಮಾಲತೇಶ್, ವಿಪ ಸದಸ್ಯ ಅಬ್ದುಲ್ ಜಬ್ಬಾರ್, ದೂಡ ಅಧ್ಯಕ್ಷ ಜಿ.ಹೆಚ್. ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಎಸ್ಪಿ ಡಾ.ಭೀಮಾಶಂಕರ್ ಎಸ್. ಗುಳೇದ್, ಜಿಪಂ ಸಿಇಓ ಎಸ್. ಅಶ್ವತಿ, ಪಾಲಿಕೆ ಆಯುಕ್ತ ಬಿ.ಹೆಚ್. ನಾರಾಯಣಪ್ಪ ಮತ್ತಿತರರಿದ್ದರು.
ಕನ್ನಡದಲ್ಲಿ ಕವಾಯಿತು ಆದೇಶ
ದಾವಣಗೆರೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್ ಆದೇಶದ ಮೇರೆಗೆ ಸಶಸ್ತ್ರ ಪೋಲಿಸ್ ನಿರೀಕ್ಷಕ ಎಸ್.ಎನ್. ಕಿರಣ್‍ಕುಮಾರ್ ಕನ್ನಡದಲ್ಲಿ ಕವಾಯಿತು ಆದೇಶ ನೀಡಿದ್ದು ಮಾದರಿಯಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸನ್ಮಾನ
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಹಿತ್ಯ-ಯು.ಎನ್. ಸಂಗನಾಳ್‍ಮಠ್ ಹೊನ್ನಾಳಿ, ಕನ್ನಡಪರ ಚಳವಳಿ-ಎಸ್.ವಿ. ಸೋಮಶೇಖರ್ ದಾವಣಗೆರೆ, ಜಾನಪದ-ವೇಷಗಾರ್ ಜಮ್ಮಣ್ಣ ಮಿರಾಲಿ ಹರಿಹರ, ರಂಗಭೂಮಿ-ಜೆ.ವಿ. ಇಂಧುಮತಿ ದಾವಣಗೆರೆ, ಚಿತ್ರಕಲೆ-ಎಂ.ಎಸ್. ರೇವಣಪ್ಪ ಹೊನ್ನಾಳಿ, ಶಿಲ್ಪಕಲೆ-ಆರ್. ಲಿಂಗಾಚಾರ್ ಹೊನ್ನಾಳಿ, ಸಂಗೀತ-ಬಣಕಾರ್ ರೇವಣ್ಣ ಬಾಗಳಿ, ತಂತ್ರಜ್ಞಾನ-ಡಾ.ಬಿ.ಇ. ರಂಗಸ್ವಾಮಿ ದಾವಣಗೆರೆ, ನೃತ್ಯ-ಡಾ. ಬಿ. ಮಂಗಳಾ ಶೇಖರ್ ದಾವಣಗೆರೆ, ಪತ್ರಿಕಾಮಾಧ್ಯಮ-ವೀರಪ್ಪ ಎಂ. ಬಾವಿ, ದೃಶ್ಯ ಮಾಧ್ಯಮ-ಕಲ್ಲೇಶಪ್ಪ ಎಂ.ಕೆ., ಛಾಯಾಗ್ರಹಣ-ಕಿರಣ್‍ಕುಮಾರ್ ಎಸ್., ಕ್ರೀಡೆ-ಲಕ್ಷ್ಮಣರಾವ್ ಸಾಳಂಕೆ, ಶಿಕ್ಷಣ-ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆ(ಸಂಸ್ಥೆ) ಇವರನ್ನು ಸನ್ಮಾನಿಸಲಾಯಿತು.







