ಅಧಿಕ ಥೈರಾಯ್ಡ್ ಹಾರ್ಮೋನ್ ಹೃದಯಕ್ಕೆ ಅಪಾಯಕಾರಿ
ಶರೀರದಲ್ಲಿ ಜೀರ್ಣ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲು ಸಾಮಾನ್ಯ ಥೈರಾಯ್ಡ್ ಹೊಂದಿರುವುದು ಅಗತ್ಯವಾಗಿದೆ. ಕ್ರಮಬದ್ಧ ಜೀರ್ಣ ವ್ಯವಸ್ಥೆಯು ಶರೀರದ ಸಹಜ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ. ಥೈರಾಯ್ಡ್ ಗ್ರಂಥಿಯು ಸ್ರವಿಸುವ ಹಾರ್ಮೋನ್ ಪ್ರಮಾಣದಲ್ಲಿ ಯಾವುದೇ ಏರಿಳಿತವು ಅಪಾಯಕಾರಿಯಾಗಬಹುದು ಮತ್ತು ಶರೀರದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ವಯಸ್ಸಾದ ವ್ಯಕ್ತಿಗಳಲ್ಲಿ ಅಧಿಕ ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯು ಅಪಧಮನಿಗಳ ಭಿತ್ತಿಗಳು ದಪ್ಪ ಮತ್ತು ಬಿರುಸಾಗುವುದು ಸೇರಿದಂತೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ನೂತನ ಅಧ್ಯಯನವೊಂದರಲ್ಲಿ ಕಂಡುಬಂದಿದೆ.
ಥೈರಾಯ್ಡ್ ಗ್ರಂಥಿಯು ನಮ್ಮ ಶರೀರದಲ್ಲಿಯ ಅತ್ಯಂತ ಮಹತ್ವದ ಅಂತಃಸ್ರಾವಕ ಗ್ರಂಥಿಯಾಗಿದ್ದು, ವಿವಿಧ ಚಯಾಪಚಯ ಕಾರ್ಯಗಳಿಗೆ ಹೊಣೆಯಾಗಿದೆ. ಆಹಾರ ಜೀರ್ಣಗೊಳ್ಳುವಿಕೆ, ಕ್ರಮಬದ್ಧ ನಿದ್ರೆ ಮತ್ತು ದೇಹತೂಕವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಹಾರ್ಮೋನ್ ನಿಯಂತ್ರಣಕ್ಕೆ ಥೈರಾಯ್ಡ್ ಗ್ರಂಥಿಯು ಅಗತ್ಯವಾಗಿದೆ. ಥೈರಾಯ್ಡ್ ಗ್ರಂಥಿಯ ಆರೋಗ್ಯ ಕೆಟ್ಟರೆ ಅದರ ಕಾರ್ಯ ನಿರ್ವಹಣೆ ವ್ಯತ್ಯಯಗೊಳ್ಳುತ್ತದೆ ಮತ್ತು ಶರೀರದಲ್ಲಿ ಹಾರ್ಮೋನ್ಗಳ ಅಸಮತೋಲನ ಉಂಟಾಗುತ್ತದೆ.
ಥೈರಾಯ್ಡ್ ಹಾರ್ಮೋನ್ ಎಫ್ಟಿ4ರ ತಪಾಸಣೆ ಮಾಡಿಸಿಕೊಳ್ಳುವುದರಿಂದ ಅಪಧಮನಿಗಳು ಕಠಿಣಗೊಳ್ಳುವ ಅಪಾಯವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಅತಿಯಾಗಿ ಬೆವರುವಿಕೆ, ಉದ್ವೇಗ, ದೇಹತೂಕದಲ್ಲಿ ಏರಿಳಿತ, ದಿಢೀರ್ ಶರೀರ ಬಿಸಿಯಾಗುವಿಕೆ, ದಣಿವು, ಆಗಾಗ್ಗೆ ಮನಃಸ್ಥಿತಿ ಬದಲಾಗುವಿಕೆ ಮತ್ತು ಖಿನ್ನತೆ ಇವು ಥೈರಾಯ್ಡಿ ಗ್ರಂಥಿಯ ಅನಾರೋಗ್ಯದ ಕೆಲವು ಪ್ರಮುಖ ಲಕ್ಷಣಗಳಾಗಿವೆ. ವ್ಯಕ್ತಿಗಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಥೈರಾಯ್ಡ್ಗೆ ಯಾವುದೇ ಹಾನಿಯನ್ನು ತಡೆಯಲು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಅರೋಗ್ಯಕರ ಥೈರಾಯ್ಡ್ ಗ್ರಂಥಿಯನ್ನು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ.
ನಾವು ಸೇವಿಸುವ ಆಹಾರವು ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಆಹಾರದಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರಬೇಕು. ಒಮೆಗಾ-3 ಫ್ಯಾಟಿ ಆ್ಯಸಿಡ್ಗಳು ಒಳ್ಳೆಯ ಕೊಬ್ಬು ಎಂದು ಪರಿಗಣಿಸಲ್ಪಟ್ಟಿವೆ. ಇವನ್ನೊಳಗೊಂಡ ಆಹಾರ ಸೇವನೆಯ ಜೊತೆಗೆ ಆಲಿವ್ ಎಣ್ಣೆಯ ಬಳಕೆಯೂ ಥೈರಾಯ್ಡ್ನ ಆರೋಗ್ಯಕ್ಕೆ ಪೂರಕವಾಗಿದೆ.
ಥೈರಾಯ್ಡ್ನ ಆರೋಗ್ಯವನ್ನು ಕಾಯ್ದುಕೊಳ್ಳಲು ಅಯೋಡಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗಿದೆ. ಅಯೋಡಿನ್ ಕೊರತೆಯಿಂದ ಥೈರಾಯ್ಡ್ ದೊಡ್ಡದಾಗುತ್ತದೆ, ಈ ಸ್ಥಿತಿಯನ್ನು ಸಾಮಾನ್ಯವಾಗಿ ಗಳಗಂಡ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಅಯೋಡೈಸ್ಡ್ ಉಪ್ಪಿನ ಸೇವನೆಯಿಂದ ಅಯೋಡಿನ್ ಕೊರತೆಯಿಂದ ಪಾರಾಗಬಹುದು.
ಹಣ್ಣುಗಳು ನಮ್ಮ ಶರೀರಕ್ಕೆ ಅಗತ್ಯವಿರುವ ಎಲ್ಲ ವಿಟಾಮಿನ್ಗಳು, ಕ್ಯಾಲ್ಶಿಯಂ, ನಾರು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಚೆರ್ರಿ, ಬ್ಲೂಬೆರ್ರಿ, ಕಾಡು ಸ್ಟ್ರಾಬೆರಿಯಂತಹ ಅಧಿಕ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಹಣ್ಣುಗಳ ಸೇವನೆಯು ಥೈರಾಯ್ಡ್ ಗ್ರಂಥಿಯನ್ನು ಉದ್ದೀಪಿಸಲು ನೆರವಾಗುತ್ತದೆ. ತರಕಾರಿಗಳು ನಾರು, ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ, ಇವುಗಳ ಸೇವನೆ ಥೈರಾಯ್ಡ್ ಸೇರಿದಂತೆ ನಮ್ಮ ಇಡೀ ಶರೀರದ ಆರೋಗ್ಯಕ್ಕೆ ಅಗತ್ಯವಾಗಿದೆ.