ಕೊಡಗಿಗೆ 3 ಪ್ರತ್ಯೇಕ ತಾಲ್ಲೂಕು ಬೇಕು : ಸಿಪಿಐಎಂ ಒತ್ತಾಯ

ಮಡಿಕೇರಿ ನ.2 : ಕೊಡಗು ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ನೂತನ ಕಾವೇರಿ ತಾಲ್ಲೂಕಿನ ಬೇಡಿಕೆಯೊಂದಿಗೆ ಪೊನ್ನಂಪೇಟೆ ಮತ್ತು ನಾಪೋಕ್ಲುಗಳನ್ನು ಒಳಗೊಂಡಂತೆ ಮೂರು ತಾಲ್ಲೂಕುಗಳನ್ನು ರಚಿಸುವಂತೆ ಆಗ್ರಹಿಸಿ ಕಮ್ಯೂನಿಸ್ಟ್ ಪಾರ್ಟಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.
ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ| ಇ.ರ. ದುರ್ಗಾಪ್ರಸಾದ್ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮೂರು ತಾಲ್ಲೂಕುಗಳ ರಚನೆಗಾಗಿ ಆಗ್ರಹಿಸಿದರು. ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡ ‘ಕಾವೇರಿ ತಾಲ್ಲೂಕು’ ಹೋರಾಟಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಲ್ಲದೆ, ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಮತ್ತು ನಾಪೋಕ್ಲು ತಾಲ್ಲೂಕುಗಳ ರಚನೆಗೂ ಸರ್ಕಾರ ಆಸಕ್ತಿ ವಹಿಸಬೇಕೆಂದು ಒತ್ತಾಯಿಸಿದರು.
ಅಧಿಕಾರ ವಿಕೇಂದ್ರೀಕರಣದ ಮೂಲಕ ಆಡಳಿತ ವ್ಯವಸ್ಥೆಯ ಜವಾಬ್ದಾರಿಗಳನ್ನು ಜನತೆಯ ಕೈಗೆ ನೀಡುವುದು ಅಭಿವೃದ್ಧಿಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಇಂತಹ ಮಹತ್ವದ ವಿಚಾರಗಳ ಹಿನ್ನೆಲೆಯಲ್ಲಿ 2008ರ ಸುಮಾರಿನಲ್ಲೆ ಕಾವೇರಿ ತಾಲ್ಲೂಕು ರಚನೆ, ಪೊನ್ನಂಪೇಟೆ ಮತ್ತು ನಾಪೋಕ್ಲು ತಾಲ್ಲೂಕು ರಚನೆಗಳ ಪ್ರಸ್ತಾಪವನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಶಯದಂತೆ ದಶಕಗಳ ಹಿಂದೆಯೇ ಕಾವೇರಿ ತಾಲ್ಲೂಕು ರಚನೆಯ ಹೋರಾಟ ಪ್ರಾರಂಭವಾಗಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಜಿಲ್ಲೆಯ ನ್ಯಾಯಯುತವಾದ ನೂತನ ತಾಲ್ಲೂಕುಗಳ ರಚನೆಯ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ಬೇಡಿಕೆ ನೆನೆಗುದಿಗೆ ಬಿದ್ದಿದೆ ಎಂದು ಅಭಿಪ್ರಾಯಪಟ್ಟರು. ಈಗಲಾದರೂ ರಾಜ್ಯ ಸರ್ಕಾರ ನೂತನ ತಾಲ್ಲೂಕು ರಚನೆಯ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ದುರ್ಗಾಪ್ರಸಾದ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಎ.ಸಿ.ಸಾಬು, ರಮೇಶ್, ಎನ್.ಡಿ. ಕುಟ್ಟಪ್ಪ, ವರ್ಗೀಸ್ ಮೊದಲಾದವರು ಪಾಲ್ಗೊಂಡಿದ್ದರು.







