ರಾಜು ತಲ್ಲೂರು ಬಂಧನಕ್ಕೆ ಆಗ್ರಹಿಸಿ ಮನವಿ

ಸೊರಬ,ನ.2 : ಆನವಟ್ಟಿ ಗ್ರಾ.ಪಂ.ಸಿಬಂದಿಯ ಮೇಲೆ ಹಲ್ಲೆ ನಡೆಸಿದ ರಾಜು ತಲ್ಲೂರು ಮತ್ತು ಅವರ ಸಂಗಡಿಗರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘದಿಂದ ಪಟ್ಟಣದ ಮುಖ್ಯಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್, ತಾಪಂ. ಕಾರ್ಯನಿರ್ವಹಣಾಧಿಕಾರಿ ಹಾಗು ಶಿಕಾರಿಪುರ ಪೊಲೀಸ್ ಉಪಾಧೀಕ್ಷರಿಗೆ ಮನವಿ ಸಲ್ಲಿಸಿದರು.
ಅಕ್ಟೋಬರ್ 31ರಂದು ಆನವಟ್ಟಿ ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರತ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಾಜಪ್ಪ ಮತ್ತು ನೀರುಗಂಟಿ ಪರಶುರಾಮ ಇವರು ಧರಣಿಯಲ್ಲಿ ನಿರತರಾದವರಿಂದ ಮನವಿಯನ್ನು ಸ್ವೀಕರಿಸಲು ತೆರಳಿದಾಗ ರಾಜು ತಲ್ಲೂರು ಮತ್ತು ಸಂಗಡಿಗರು ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ ಬೂಟುಗಾಲಿನಿಂದ ಹಲ್ಲೆಯನ್ನು ಮಾಡಿರುತ್ತಾರೆ.
ಈ ಅಮಾನವೀಯ ಕೃತ್ಯ ಎಸಗಿದ ರಾಜು ತಲ್ಲೂರು ಮತ್ತು ಅವರ ಸಂಗಡಿಗರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆರ್.ಡಿ.ಪಿಆರ್ ಸಂಘದ ಅಧ್ಯಕ್ಷ ನೀಲಪ್ಪ ಭೂತಣ್ಣನವರ್, ಗೌರವಾಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಕೆ.ಹೋಮೇಶ್, ಪದಾಧಿಕಾರಿಗಳಾದ ನಾಗರಾಜ್, ಸೀಮಾ, ಶೃತಿ, ಸುಮಾ, ತಾಲೂಕ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಹೊಳೆಲಿಂಗಪ್ಪ, ಎಸ್.ಬಿ.ಈಶ್ವರಪ್ಪ, ಎಂ.ನಾಗಪ್ಪ ಕೇಶವಮೂರ್ತಿ, ಗಂಗಾಧರ್ ನಾಯ್ಕ್, ಬೆಟ್ಟೇಗೌಡ, ಹನೀಫ್, ವೀರಬಸಪ್ಪ, ಜಗದೀಶ್ ಮತ್ತಿತರರಿದ್ದರು.







