ಮಹಿಳೆಯ ಕೊಲೆ : ನಾಲ್ವರು ಆರೋಪಿಗಳ ಬಂಧನ

ಸೊರಬ,ನ.2: ಮಹಿಳೆಯೋರ್ವಳ ಕೊಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಸೊರಬ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲತಾ (43) ಕೊಲೆಯಾದ ದುರ್ದೈವಿ. ಕೊಲೆಗೆ ಸಂಬಂಧಿಸಿದಂತೆ ಆನವಟ್ಟಿಯ ದ್ವಿಚಕ್ರ ವಾಹನದ ಶೋ ರೂಂ ಮಾಲೀಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ಸಿ.ಬಸವರಾಜ (45), ತಲ್ಲೂರು ಗ್ರಾಮದ ನಂದೀಶ್ವರ ನಾಯ್ಕ್ (40), ಹಾನಗಲ್ ತಾಲ್ಲೂಕಿನ ಇನಾಂಲಕ್ಮಾಪುರ ಗ್ರಾಮದ ಬಸವರಾಜ (29), ಹಾಗೂ ಎಣ್ಣೆಕೊಪ್ಪ ಗ್ರಾಮದ ಅರುಣ ಕುಮಾರ (35) ಬಂಧಿತ ಕೊಲೆ ಆರೋಪಿಗಳು.
ಆರೋಪಿಗಳ ವಿರುದ್ಧ ಸೆಕ್ಷನ್ 301 ಹಾಗೂ 201ರ ಅಡಿಯಲ್ಲಿ ಕೇಸ್ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಅಕ್ಟೋಬರ್ 8 ರಂದು ಸಂಪಗೋಡು ಅರಣ್ಯದ ಪ್ರದೇಶದಲ್ಲಿ ಕೊಲೆಗೀಡಾದ ಮಹಿಳೆಯೋರ್ವರ ಶವ ಪತ್ತೆಯಾಗಿತ್ತು. ಮೃತರ ವಿವರಗಳು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ, ಕೊಲೆಗೀಡಾದ ಮಹಿಳೆಯು ಆನವಟ್ಟಿ ಸಮೀಪದ ವಿಠಲಾಪುರ ಗ್ರಾಮದ ನಿವಾಸಿ ಲತಾ (43) ಎಂಬುವುದು ಬೆಳಕಿಗೆ ಬಂದಿತ್ತು.
ಸಿದ್ದಾಪುರ ತಾಲೂಕಿನ ಯುವಕನೋರ್ವನೊಂದಿಗೆ ಲತಾರವರ ವಿವಾಹವಾಗಿತ್ತು. ಆದರೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪತಿ ತೊರೆದು ಬಂದಿದ್ದ ಲತಾ, ಮತ್ತೆ ವಿಠಲಾಪುರ ಗ್ರಾಮದಲ್ಲಿಯೇ ವಾಸಿಸುತ್ತಿದ್ದಳು. ಈ ನಡುವೆ ಅವರಿಗೆ ಗುತ್ತಿಗೆದಾರ, ಆನವಟ್ಟಿಯ ಬೈಕ್ ಶೋ ರೂಂ ಮಾಲೀಕ ಬಸವರಾಜ್‍ರವರ ಪರಿಚಯವಾಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು.
ಇತ್ತೀಚೆಗೆ ಲತಾಳು, ಹಣ-ಆಸ್ತಿಪಾಸ್ತಿ ಕೊಡುವಂತೆ ಬಸವರಾಜ್‍ಗೆ ಒತ್ತಾಯಿಸುತ್ತಿದ್ದಳು. ಇಲ್ಲದಿದ್ದರೆ ನಿಮ್ಮ ಮನೆಗೆ ಆಗಮಿಸಿ ವಾಸಿಸುವುದಾಗಿ, ನಮ್ಮಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಬಸವರಾಜ್, ಲತಾಳ ಹತ್ಯೆ ನಡೆಸುವ ನಿರ್ಧಾರ ಮಾಡಿದ್ದ.
ಸುಫಾರಿ: ಅದರಂತೆ ಬಸವರಾಜ್‍ನು ಸುಫಾರಿ ಹಂತಕರಾದ ನಂದೀಶ್‍ನಾಯ್ಕ್ ಹಾಗೂ ಅರುಣ್‍ಕುಮಾರ್‍ರವರನ್ನು ಭೇಟಿಯಾಗಿ ಲತಾಳ ಹತ್ಯೆ ನಡೆಸುವುದಕ್ಕೆ ಸುಫಾರಿ ಕೊಟ್ಟಿದ್ದ. ಹಂತಕರಿಗೆ 2 ಲಕ್ಷ ರೂ. ಪಾವತಿಸಿದ್ದ. ಪೂರ್ವ ನಿರ್ಧರಿತ ಸಂಚಿನಂತೆ ಬಸವರಾಜ್‍ನು ಅಕ್ಟೋಬರ್ 6 ರಂದು ಲತಾಳನ್ನು ನಂಬಿಸಿ ಕಾರಿನಲ್ಲಿ ಬನವಾಸಿಗೆ ಕರೆದೊಯ್ದಿದ್ದ. ಈ ವೇಳೆ ತನ್ನ ಶೋ ರೂಂನಲ್ಲಿ ಕೆಲಸ ಮಾಡುವ ಬಸವರಾಜ್ ಎಂಬಾತನನ್ನು ಕರೆತಂದಿದ್ದ.
ಬಸವರಾಜ್ ಸೂಚನೆಯಂತೆ ಈರ್ವರು ಹಂತಕರು ಬೈಕ್‍ನಲ್ಲಿ ಕಾರನ್ನು ಹಿಂಬಾಲಿಸುತ್ತಿದ್ದರು. ಸಂಪಗೋಡು ಬಳಿ ಕಾರು ನಿಲ್ಲಿಸಿ ಅರಣ್ಯದೊಳಗೆ ಲತಾಳನ್ನು ಬಸವರಾಜ್ ಕರೆದೊಯ್ದಿದ್ದ. ಹಂತಕರು ಕೂಡ ಬೈಕ್ ನಿಲ್ಲಿಸಿ ಅರಣ್ಯದೊಳಗೆ ತೆರಳಿದ್ದರು. ಬಸವರಾಜ್ ಸೂಚನೆಯಂತೆ ಆರೋಪಿಗಳಿಬ್ಬರು ರಾಡ್‍ನಿಂದ ಲತಾಳ ತಲೆಗೆ ಹೊಡೆದು ಹತ್ಯೆ ಮಾಡಿದ್ದರು. ನಂತರ ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದರು.
ಈ ಎಲ್ಲ ಆರೋಪಿಗಳು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆರಾಮಾಗಿ ಓಡಾಡಿಕೊಂಡಿದ್ದರು. ಮತ್ತೊಂದು ಕಡೆ ಪೊಲೀಸರು ಲತಾ ಬಳಸುತ್ತಿದ್ದ ಮೊಬೈಲ್ ನಂಬರ್ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ವೇಳೆ ಬಸವರಾಜ್‍ನು ಲತಾಳೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದುದು ಗೊತ್ತಾಗಿದೆ. ಆಪಾದಿತರಿಗೆ ಗೊತ್ತಾಗದಂತೆ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು, ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.







