ಕ್ಲಪ್ತಕಾಲದಲ್ಲಿ ಅಧಿಕಾರ ನಿರ್ವಹಿಸಿ: ದಿಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ನ.2: ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ತನ್ನ ಅಧಿಕಾರವನ್ನು ಕ್ಲಪ್ತಕಾಲದಲ್ಲಿ ವಿವೇಚನೆ ಸಹಿತ ನಿರ್ವಹಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ದಿಲ್ಲಿ ರಾಜ್ಯದಲ್ಲಿ ಯಾವ ಸರಕಾರಿ ಸಿಬ್ಬಂದಿಗಳೂ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹಾಗೂ ಅವರ ಸಚಿವ ಸಂಪುಟದ ಆದೇಶಗಳನ್ನು ಪಾಲಿಸದಂತಹ ಪರಿಸ್ಥಿತಿಯನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಿರ್ಮಿಸಿದ್ದಾರೆ ಎಂದು ದಿಲ್ಲಿ ಸರಕಾರ ನ್ಯಾಯಾಲಯಕ್ಕೆ ತಿಳಿಸಿದ ಸಂದರ್ಭ ಉಚ್ಛ ನ್ಯಾಯಾಲಯ ಈ ಸೂಚನೆ ನೀಡಿದೆ.
ಲೆಫ್ಟಿನೆಂಟ್ ಗವರ್ನರ್ ದಿಲ್ಲಿಯ ಆಡಳಿತಾಂಗದ ಮುಖ್ಯಸ್ಥರು ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದಿಲ್ಲಿ ಸರಕಾರ ನ್ಯಾಯಾಲಯಕ್ಕೆ ದೂರು ನೀಡಿತ್ತು.ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರಕಾರವು ದಿಲ್ಲಿ ಸರಕಾರದ ಆಡಳಿತ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿ ಆಡಳಿತವನ್ನು ನಿಷ್ಕ್ರಿಯಗೊಳಿಸಿದೆ ಎಂದು ದಿಲ್ಲಿ ಸರಕಾರ ದೂರಿನಲ್ಲಿ ತಿಳಿಸಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರಿದ್ದ ಸಂವಿಧಾನಪೀಠವು, ದಿಲ್ಲಿ ಲೆಪ್ಟಿನೆಂಟ್ ಗವರ್ನರ್ ವಿನಾಕಾರಣ ಫೈಲ್‌ಗಳನ್ನು ಬದಿಗೆ ಸರಿಸುವ ಮೂಲಕ ಸರಕಾರದ ನಿರ್ಧಾರಗಳನ್ನು ವಿಳಂಬಿಸಬಾರದು .ಕ್ಲಪ್ತಕಾಲದಲ್ಲಿ ವಿವೇಚನೆಯುಕ್ತವಾಗಿ ಅಧಿಕಾರ ನಿರ್ವಹಿಸಬೇಕು ಎಂದು ಸೂಚಿಸಿದರು
ದಿಲ್ಲಿ ವಿಧಾನಸಭೆ ವ್ಯಾಪ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತನಗೆ ಅನನ್ಯವಾದ ಕಾರ್ಯಕಾರಿ ಅಧಿಕಾರವಿದೆ ಎಂದು ದಿಲ್ಲಿ ಸರಕಾರ ಸುಪ್ರೀಂಕೋರ್ಟ್‌ಗೆ ಫೆಬ್ರವರಿ 2ರಂದು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪೊಲೀಸ್ ವ್ಯವಸ್ಥೆ, ಭೂಮಿ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ವಿಷಯದಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಇರುವ ಪ್ರಾಧಾನ್ಯತೆಯನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿತು. 1991ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ದಿಲ್ಲಿಗೆ ವಿಧಾನಸಭೆ ಹಾಗೂ ಚುನಾಯಿತ ಸರಕಾರವನ್ನು ಹೊಂದುವ ಅಧಿಕಾರವನ್ನು ನೀಡಲಾಗಿದೆ.







