ಬಿಜೆಪಿಯದ್ದು ಪಶ್ಚಾತ್ತಾಪದ ನಾಟಕ ರ‍್ಯಾಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.2: ಬಿಜೆಪಿ ಮಾಡುತ್ತಿರುವುದು ಪರಿವರ್ತನಾ ರ‍್ಯಾಲಿ ಅಲ್ಲ, ಪಶ್ಚಾತ್ತಾಪದ ನಾಟಕ ರ‍್ಯಾಲಿ. ಮಾಡಿದ ಪಾಪ ಅವರನ್ನು ಕೊರೆಯುತ್ತಿದೆ, ಹೀಗಾಗಿಯೇ ಪ್ರಾಯಶ್ಚಿತ್ತದ ನಾಟಕ ಮಾಡುತ್ತಾ ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗುರುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡಿ ಮನುಷ್ಯರ ನಡುವೆ, ಧರ್ಮ ಮಧ್ಯೆ ಸಂಘರ್ಷ ಉಂಟು ಮಾಡಿ ಕೋಮು ಸೌಹಾರ್ದತೆಯನ್ನು ಯಾವಾಗಲೂ ಹಾಳು ಮಾಡುತ್ತಾರೆ. ಹೀಗಾಗಿ, ಪರಿವರ್ತನೆ ಆಗಬೇಕಿರುವುದು ಬಿಜೆಪಿ ನಾಯಕರಲ್ಲಿ ಎಂದರು.
ಜನ ಈಗಾಗಲೇ ರಾಜಕೀಯವಾಗಿ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಸೂಕ್ತ ತೀರ್ಮಾನ ಕೈಗೊಳ್ಳುವ ಶಕ್ತಿ ಅವರಿಗೆ ಇದೆ. ಪರಿವರ್ತನಾ ರ‍್ಯಾಲಿ ಜನತೆಯ ದೃಷ್ಟಿಯಿಂದ ಅನಗತ್ಯ. ಮತ್ತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲು ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದ ಅವರು, ಮೂರು ವರ್ಷವಾದರೂ 'ಅಚ್ಛೇ ದಿನ್' ಬಂದಿಲ್ಲ. 'ಅಚ್ಛೇ ದಿನ್' ಬಂದಿದ್ದು ಅಮಿತ್ ಶಾ ಪುತ್ರ ಜೈ ಶಾಗೆ ಎಂದು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದು ಕಿಡಿಕಾರಿದರು.
ಬಿಜೆಪಿಯವರು ಎಷ್ಟೇ ಯಾತ್ರೆ ಮಾಡಿದರೂ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಯಡಿಯೂರಪ್ಪ ಮತ್ತು ಅಮಿತ್ ಶಾ ಮುಖ ನೋಡಿದಷ್ಟೂ ನಮಗೆ ಶಕ್ತಿ ಹೆಚ್ಚಾಗುತ್ತದೆ. ನಮ್ಮದು ಹಗರಣ ಮುಕ್ತ ಸರಕಾರ. ನಮ್ಮ ಸರಕಾರದ ವಿರುದ್ಧ ಬಿಜೆಪಿಯವರು ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರ. ನಾನೆ ಮುಂದಿನ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಹೇಳಿಕೊಳ್ಳುತ್ತಾರೆ. ಆದರೆ, ಜಗದೀಶ ಶೆಟ್ಟರ್, ಸದಾನಂದಗೌಡ, ಪ್ರಹ್ಲಾದ ಜೋಷಿ, ಅಶೋಕ್, ಅನಂತಕುಮಾರ್ ಹೆಗಡೆ, ಅನಂತಕುಮಾರ್ ಮತ್ತಿತರರು ಯಡಿಯೂರಪ್ಪಅವರ ಕಾಲೆಳೆಯುತ್ತಿದ್ದಾರೆ ಎಂದರು.
ಪ್ರತಿಯೊಬ್ಬರ ಬ್ಯಾಂಕ್‌ಗೆ ಹದಿನೈದು ಲಕ್ಷ ರೂ. ಜಮೆ ಮಾಡುವುದಾಗಿ ಪ್ರಧಾನಿಯವರು ಹೇಳಿದ್ದರು. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮೆಯಾಗಿದೆ. ಉದ್ಯೋಗ ಸೃಷ್ಟಿ ಎಷ್ಟಾಗಿದೆ ಎಂದು ಜನರಿಗೆ ಹೇಳಬೇಕು. ನೋಟು ಅಮಾನ್ಯದಿಂದ ನಕಲಿ ನೋಟು ಹಾವಳಿ ನಿಂತಿಲ್ಲ. ಕಪ್ಪುಹಣ ಹೊಂದಿರುವವರು ನಿದ್ದೆಗೆಟ್ಟಿಲ್ಲ ಎಂಬುದನ್ನೂ ಜನರಿಗೆ ವಿವರಿಸಬೇಕು ಎಂದು ಸಿದ್ದರಾಮಯ್ಯ ನುಡಿದರು.
ರೈತರ ಕ್ಷಮೆ ಕೇಳಿ: ಸಾಲ ಮನ್ನಾ ಮಾಡಿ ಎಂದರೆ ಬಿಜೆಪಿ ನಾಯಕರು ಲಘುವಾಗಿ ಮಾತನಾಡುತ್ತಾರೆ. ರಾಜ್ಯ ಸರಕಾರ 8165 ಕೋಟಿ ರೂ. ಸಾಲ ಮನ್ನಾ ಮಾಡಿ ರೈತರಿಗೆ ಲಾಲಿಪಾಪ್ ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳುತ್ತಾರೆ. ಸಾಲ ಮನ್ನಾ ಫ್ಯಾಷನ್ ಎಂದು ಮತ್ತೊಬ್ಬರು ಟೀಕೆ ಮಾಡುತ್ತಾರೆ.
ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಉದ್ಯಮಿಗಳು, ಕಾರ್ಪೊರೇಟ್ ಕಂಪೆನಿಗಳ ಸಾವಿರಾರು ಕೋಟಿ ರೂ.ಗಳ ಸಾಲ ಮನ್ನಾ ಮಾಡಿದರು. ಆದರೆ, ರೈತರ ಸಾಲ ಮನ್ನಾ ಬಗ್ಗೆ ತಲೆ ಕೆಡಿಕೊಳ್ಳುತ್ತಿಲ್ಲ. ಹೀಗಾಗಿ, ಪರಿವರ್ತನಾ ರ‍್ಯಾಲಿಯಲ್ಲಿ ಬಿಜೆಪಿ ನಾಯಕರು ರೈತರ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ನಾಗೇಂದ್ರ, ಆನಂದ್‌ಸಿಂಗ್, ಕೃಷ್ಣಯ್ಯ ಶೆಟ್ಟಿ ಮತ್ತಿತರರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದರು. ಈಗ ಅವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ನಾವೆಲ್ಲ ಜೈಲಿಗೆ ಹೋಗಿ ಬಂದವರು ಎಂದು ಯಡಿಯೂರಪ್ಪ ಮತ್ತು ಅಮಿತ್ ಶಾ ಜನರಿಗೆ ಹೇಳಬೇಕು ಎಂದ ಅವರು, ಇದು ಕರ್ನಾಟಕ, ಉತ್ತರ ಪ್ರದೇಶ ಅಲ್ಲ. ನಮ್ಮ ಜನ ರಾಜಕೀಯವಾಗಿ ಪ್ರಬುದ್ಧರು. ಅವರಿಗೆ ತಿಳಿವಳಿಕೆ ಇದೆ. ಇದು ಬಸವಣ್ಣ, ಕನಕದಾಸರು, ಕುವೆಂಪು ಅವರ ನಾಡು. ಇವರೆಲ್ಲ ನಮ್ಮ ನಾಡಿನಲ್ಲಿ ಜಾತ್ಯತೀತೆಯ ಬೀಜವನ್ನು ಗಟ್ಟಿಯಾಗಿ ಬಿತ್ತಿದ್ದಾರೆ ಎಂದರು.
ಶಕ್ತಿ ಹೆಚ್ಚಾಗುತ್ತದೆ: ಅಮಿತ್ ಶಾ, ಯೋಗಿ ಆದಿತ್ಯನಾಥ ಅವರನ್ನು ಇಲ್ಲಿಗೆ ಕರೆತರುತ್ತೇವೆ. ಹಿಂದುತ್ವದ ಹೆಸರಲ್ಲಿ ಮತಗಳ ಕ್ರೋಡೀಕರಣ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ನಮ್ಮ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಅವರಿಗೆ ನಮ್ಮ ಸರಕಾರದ ಬಗ್ಗೆ ಸಮಾಧಾನ ಇದೆ. ಹೀಗಾಗಿ, ಅವರು ನಮಗೆ ಮತ್ತೆ ಆಶೀರ್ವಾದ ಮಾಡಲು ತೀರ್ಮಾನ ಮಾಡಿದ್ದಾರೆ ಎಂದರು.
‘ಭೂ ಹಗರಣದ ತನಿಖೆ’
ಮಾಜಿ ಸಚಿವ ಆರ್.ಅಶೋಕ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ಭೂ ಹಗರಣದ ಕುರಿತು ತನಿಖೆ ನಡೆಸುವ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚಿಸಲಾಗುವುದು. ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದಾಗ ಅಶೋಕ್ ಹಲವಾರು ಮಂದಿಗೆ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಕಾನೂನು ರೀತ್ಯ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನ.6ರ ಬಳಿಕ ತಪಾಸಣೆ
‘ನ.6ರ ಬಳಿಕ ನಗರದ ವಿವಿಧೆಡೆ ಅನಿರೀಕ್ಷಿತ ತಪಾಸಣೆ ನಡೆಸುತ್ತೇನೆ. ಆಗ ರಸ್ತೆಯಲ್ಲಿ ಗುಂಡಿಗಳು ಕಂಡು ಬಂದರೆ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ಬಿಜೆಪಿ ನಾಯಕರು ಇಂದಿನಿಂದ ನಡೆಸುತ್ತಿರುವ ಪರಿವರ್ತನಾ ರ್ಯಾಲಿ ಒಂದು ದೊಡ್ಡ ನಾಟಕ. ಅವರ ಪಾಪಗಳಿಗೆ ಈ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಟಿದ್ದಾರೆ.’
-ಸಿದ್ದರಾಮಯ್ಯ, ಮುಖ್ಯಮಂತ್ರಿ







