ಎನ್‌ಟಿಪಿಸಿ ಸ್ಥಾವರದಲ್ಲಿ ಸ್ಫೋಟ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

ರಾಯ್ ಬರೇಲಿ, ನ. 2: ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಉಂಚಾಹಾರ್‌ನ ಎನ್‌ಟಿಪಿಸಿ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಪ್ರಾಥಮಿಕ ಕಾರ್ಯದರ್ಶಿ (ಗೃಹ) ಅರವಿಂದ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟದ ಕುರಿತ ಪ್ರಾಥಮಿಕ ತನಿಖೆಗೆ ಎನ್‌ಟಿಪಿಸಿ ಸೂಚಿಸಿದೆ. ಮುಖ್ಯಮಂತ್ರಿ ಬುಧವಾರ ದುರಂತದಲ್ಲಿ ಮೃತಪಟ್ಟ ಕುಟುಂಬದ ವರಿಗೆ 2 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಘಟಕ ಸಂಖ್ಯೆ 6ರಲ್ಲಿ ಬುಧವಾರ ಅಪರಾಹ್ನ 3.30ರ ಹೊತ್ತಿಗೆ ಅಸಹಜ ಸದ್ದು ಕೇಳಿಸಿತು ಎಂದು ಎನ್‌ಟಿಪಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡ ಸುಮಾರು 80 ಮಂದಿ ಕಾರ್ಮಿಕರನ್ನು ಎನ್‌ಟಿಪಿಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಕಾರ್ಮಿಕ ರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1,550 ಮೆಗಾ ವ್ಯಾಟ್ ಸಾಮರ್ಥ್ಯದ ಈ ಘಟಕ 9 ರಾಜ್ಯಗಳಿಗೆ ವಿದ್ಯುತ್ ಪೂರೈಸುತ್ತದೆ. ಸುಮಾರು 870ಕ್ಕೂ ಅಧಿಕ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅನೇಕರು ಮೃತಪಟ್ಟ ಬಗ್ಗೆ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ
ಸ್ಫೋಟ ಸಂಭವಿಸಿದ ಉಂಚಾಹಾರ್‌ನ ಎನ್‌ಟಿಪಿಸಿ ಸ್ಥಾವರವಿರುವ ನಿವೇಶನಕ್ಕೆ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ ಹಾಗೂ ಸ್ಫೋಟದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ರಾಯ್ ಬರೇಲಿಗೆ ಆಗಮಿಸಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.







