ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸಿಬ್ಬಂದಿಯಿಂದ ಅಹೋರಾತ್ರಿ ಧರಣಿ
ಬೆಂಗಳೂರು, ನ.2: ಕೆಎಸ್ಸಾರ್ಟಿಸಿ ಸಿಬ್ಬಂದಿಯನ್ನು ಸ್ವ ಸ್ಥಳಗಳಿಗೆ ವರ್ಗಾವಣೆ, ತಿಂಗಳಿಗೆ ನಾಲ್ಕು ದಿನಗಳ ಕನಿಷ್ಠ ರಜೆ, ಕಾನೂನಿನ ಪ್ರಕಾರ ದಿನಕ್ಕೆ 8ಗಂಟೆ ಕೆಲಸದ ಅವಧಿ ನಿಗದಿ ಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ಕೆಎಸ್ಸಾರ್ಟಿಸಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಹಾಸನ ವಿಭಾಗಕ್ಕೆಂದು ಅರ್ಜಿ ಕರೆದು ಆಯ್ಕೆಯಾದ ಕಾರ್ಮಿಕರನ್ನು ಮಂಗಳೂರು ವಿಭಾಗಕ್ಕೆ 3 ತಿಂಗಳ ಕಾಲ ನಿಯೋಜಿಸಲಾಗಿತ್ತು. ಆದರೆ. ಒಂದು ವರ್ಷ ಕಳೆದರೂ ಪುನಃ ಅವರನ್ನು ಹಾಸನ ವಿಭಾಗಕ್ಕೆ ವಾಪಸ್ ಕರೆಸಿಕೊಂಡಿಲ್ಲ. ಇದರಿಂದಾಗಿ ಕೆಎಸ್ಸಾರ್ಟಿಸಿ ಸಿಬ್ಬಂದಿ ತಮ್ಮ ಅನಾರೋಗ್ಯಪೀಡಿತ ಪೋಷಕರನ್ನು ಹಾಗೂ ಹೆಂಡತಿ-ಮಕ್ಕಳನ್ನು ಬಿಟ್ಟು ಕೆಲಸ ಮಾಡುತ್ತಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಹೋರಾತ್ರಿ ಧರಣಿಗೆ ಚಾಲನೆ ನೀಡಿದ ಸಿಐಟಿಯು ಉಪಾಧ್ಯಕ್ಷ ಕೆ.ಪ್ರಕಾಶ್ ತಿಳಿಸಿದರು.
ಡಿಪೋದಿಂದ ಡಿಪೋಗೆ ಹಾಗೂ ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಕೋರಿರುವ ನೌಕರರಿಗೆ ಕಾನೂನು ಪ್ರಕಾರವಾಗಿ ವರ್ಗಾವಣೆ ಮಾಡಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ ಹಾಗೂ ಭ್ರಷ್ಟಾಚಾರದಿಂದಾಗಿ ತಮ್ಮ ಇಚ್ಛೆಗೆ ಅನುಸಾರವಾಗಿ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ತಾಲೂಕು, ಜಿಲ್ಲೆಗಳನ್ನು ಬಿಟ್ಟು ನೂರಾರು ಕಿಮೀ ದೂರದ ಸ್ಥಳಗಳಿಗೆ ವರ್ಗಾವಣೆಯಾಗುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕ ಕಾನೂನು ಜಾರಿಯಾಗುತ್ತಿಲ್ಲ. ಒಬ್ಬ ಕಾರ್ಮಿಕ ಇಲ್ಲವೆ ಸಿಬ್ಬಂದಿ ದಿನಕ್ಕೆ 8 ಗಂಟೆ ಕಾರ್ಯನಿರ್ವಹಿಸಬೇಕು. ಆದರೆ, ಸಾರಿಗೆ ಸಿಬ್ಬಂದಿ ಸತತವಾಗಿ 30ಕ್ಕೂ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸಿಬ್ಬಂದಿ ದೈಹಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾಮಾನ್ಯವಾಗಿ ಎಲ್ಲ ನೌಕರರಿಗೂ ಹಬ್ಬದ ರಜೆಗಳನ್ನು ಹೊರತು ಪಡಿಸಿ ತಿಂಗಳಿಗೆ ನಾಲ್ಕು ರಜೆ ಇದೆ. ಆದರೆ, ಸಾರಿಗೆ ಸಿಬ್ಬಂದಿಗೆ ತಿಂಗಳಿಗೆ ನಾಲ್ಕು ರಜೆಗಳು ಕನಸಿನ ಮಾತಾಗಿದೆ. ರಜೆ ಪಡೆಯಬೇಕಾದರೆ ಮೇಲಧಿಕಾರಿಗಳಿಗೆ ಲಂಚ ಕೊಡಬೇಕು. ಇಲ್ಲವೇ ಓಲೈಕೆ ಮಾಡಬೇಕು. ಇವೆರಡೂ ಮಾಡದಿದ್ದರೆ ಮೇಲಧಿಕಾರಿಗಳು ಕೊಡುವಾಗ ರಜೆ ತೆಗೆದುಕೊಳ್ಳಬೇಕು. ಇಂತಹ ಕಾರ್ಮಿಕ ವಿರೋಧಿ ಕಾನೂನುಗಳಿಗೆ ತಿಲಾಂಜಲಿ ಇಡಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಸಿಐಟಿಯು ಅಧ್ಯಕ್ಷ ಎಚ್.ಡಿ.ರೇವಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್, ಉಪಾಧ್ಯಕ್ಷ ಎಂ.ನಾಗರಾಜು, ಜಂಟಿ ಕಾರ್ಯದರ್ಶಿ ಆನಂದ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬೇಡಿಕೆಗಳು
1. 2016-17ನೆ ಸಾಲಿನ ಬೋನಸ್ ಹಣವನ್ನು 4 ನಿಗಮಗಳ ಕಾರ್ಮಿಕರಿಗೆ ನೀಡುವುದು.
2. ಬಿಎಂಟಿಸಿ ನಿಗಮದಿಂದ ವಜಾ ಮಾಡಿರುವ ಸಿಐಟಿಯು ಮುಖಂಡರಾದ ಆನಂದ ಮತ್ತು ಎಂ.ಎಸ್.ಸುರೇಶ್ ವೇತನ ಹಿಂಬಾಕಿ ಸಮೇತ ಕೆಲಸಕ್ಕೆ ಪುನರ್ ನೇಮಕ ಮಾಡುವುದು.
3. 1996ರಿಂದಲೂ ಕಾರ್ಮಿಕ ಸಂಘದ ಚುನಾವಣೆ ನಡೆಸಿಲ್ಲ. ಹೀಗಾಗಿ ಕಾರ್ಮಿಕ ಸಂಘದ ಮಾನ್ಯತೆಗಾಗಿ ಚುನಾವಣೆ ನಡೆಸಬೇಕು.
4. ಘಟಕ, ವಿಭಾಗ ಕೇಂದ್ರ ಕಚೇರಿ ಮಟ್ಟದಲ್ಲಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಬಗೆಹರಿಸಬೇಕು.
5. ಸಿಬ್ಬಂದಿಗಳ ವರ್ಗಾವಣೆ ಪಾರದರ್ಶಕವಾಗಿರಬೇಕು.







