ಕಾಂಗ್ರೆಸ್ ಬೆಂಬಲಿಸಲು ಹಾರ್ದಿಕ್ ಪಟೇಲ್ ನಿರ್ಧಾರ

ಅಹ್ಮದಾಬಾದ್, ನ.2: ಕಾಂಗ್ರೆಸ್ ಪಕ್ಷ ‘ಪಟೇಲ್ ಮೀಸಲಾತಿ’ಗೆ ಬಹಿರಂಗ ಬೆಂಬಲ ಪ್ರಕಟಿಸಿರುವ ಕಾರಣ ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹಾರ್ದಿಕ್ ಪಟೇಲ್ ಘೋಷಿಸಿದ್ದಾರೆ.
ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಪಟೇಲ್ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪೂರೈಸಲು ಕಾಂಗ್ರೆಸ್ ಯಾವ ರೀತಿ ಯೋಜನೆ ರೂಪಿಸಿದೆ ಎಂಬುದನ್ನು ನವೆಂಬರ್ 3ರ ಒಳಗೆ ಘೋಷಿಸಬೇಕು. ಇಲ್ಲದಿದ್ದರೆ ತೀವ್ರ ಪರಿಣಾಮ ಎದುರಿಸಬೇಕು ಎಂದು ಹಾರ್ದಿಕ್ ಪಟೇಲ್ ಗಡುವು ನೀಡಿದ್ದರು. ಆದರೆ ಈ ಗಡುವಿಗೆ ಕಾಂಗ್ರೆಸ್‌ನಿಂದ ಯಾವುದೇ ಪ್ರತ್ರಿಕಿಯೆ ವ್ಯಕ್ತವಾಗಿಲ್ಲ. ಈ ಮಧ್ಯೆ ಸೌರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ತೀವ್ರ ಪ್ರಚಾರ ಕಾರ್ಯ ನಡೆಸಿ ಅಹ್ಮದಾಬಾದ್‌ಗೆ ವಾಪಸಾದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಹಾರ್ದಿಕ್ ಪಟೇಲ್, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ಪಟೇಲ್ ಸಮುದಾಯಕ್ಕೆ ಕರೆ ನೀಡಿದರು. ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ನೀವು ಆ ಪಕ್ಷದ ಪರವಾಗಿ ಮತ ಯಾಚನೆ ನಡೆಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ಜನರು ಜಾಣರಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ನಾನು ಕರೆ ನೀಡಿದಾಗಲೇ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ಅವರು ನಿರ್ಧರಿಸಿಬಿಡುತ್ತಾರೆ ಎಂದರು. ಪಟೇಲ್ ಸಮುದಾಯವನ್ನು ವಂಚಿಸುತ್ತಿದ್ದೇನೆ ಎಂದು ತನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಇವರು ಬಿಜೆಪಿಯ ಕುಮ್ಮಕ್ಕಿನಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ ಹಾರ್ದಿಕ್, ರಾಜ್ಯದಲ್ಲಿ ಪಟೇಲ್ ಸಮುದಾಯ ಹಲವು ವರ್ಷದಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಆದರೆ ಬಿಜೆಪಿ ಪಟೇಲ್ ಸಮುದಾಯದ ಮೀಸಲಾತಿ ಬೇಡಿಕೆ ತಿರಸ್ಕರಿಸುವ ಮೂಲಕ ನಮ್ಮನ್ನು ವಂಚಿಸಿದೆ ಎಂದರು.
ಗುಜರಾತ್‌ನ ಪಟೇಲ್ ಸಮುದಾಯದ ಯುವ ಮುಖಂಡನಾಗಿ ಕಳೆದ ಎರಡು ವರ್ಷಗಳ ಹಿಂದೆ ಮುಂಚೂಣಿಗೆ ಬಂದಿರುವ ಹಾರ್ದಿಕ್ ಪಟೇಲ್ ಭಾಗವಹಿಸುವ ಸಾರ್ವಜನಿಕ ಸಮಾರಂಭಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ ಪಟೇಲ್ ಸಮುದಾಯದ ಕನಿಷ್ಟ ಆರು ಸಂಘಟನೆಗಳು ಹಾರ್ದಿಕ್‌ರನ್ನು ವಿರೋಧಿಸುತ್ತಿವೆ. ತನ್ನ ಸ್ವಾರ್ಥ ಸಾಧನೆಗಾಗಿ ಪಟೇಲ್ ಮೀಸಲಾತಿ ಚಳವಳಿಯನ್ನು ರಾಜಕೀಯಗೊಳಿಸಿದ್ದಾರೆ ಎಂಬುದು ಈ ಸಂಘಟನೆಗಳ ಆರೋಪವಾಗಿದೆ.
ಒಬಿಸಿ ವರ್ಗಕ್ಕೆ ಶೇ.50ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಕೋಟಾ(ಭಾಗ)ದಲ್ಲಿ ಪಟೇಲ್ ಸಮುದಾಯವನ್ನೂ ಸೇರಿಸುವ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಸ್ಪಷ್ಟ ಭರವಸೆ ದೊರಕದಿದ್ದರೂ ಹಾರ್ದಿಕ್ ಆ ಪಕ್ಷಕ್ಕೆ ಬೆಂಬಲ ಘೋಷಿಸಿರುವ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ ಎಂದು ಸಂಘಟನೆಗಳು ದೂರುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅಲ್ಪೇಶ್ ಠಾಕೂರ್ ಒಬಿಸಿ ಕೋಟಾದಲ್ಲಿ ಪಟೇಲ್ ಸಮುದಾಯಕ್ಕೆ ಪಾಲು ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಪಟೇಲ್ ಸಮುದಾಯಕ್ಕೆ ವಿಪಕ್ಷಗಳು ನೀಡಬಹುದಾದ ಸೂಕ್ತ ಭರವಸೆ ಎಂದರೆ- ಒಂದು ವೇಳೆ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಪಟೇಲ್ ಸಮುದಾಯದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.20ರಷ್ಟು ಮೀಸಲಾತಿ ಸೌಲಭ್ಯ ನೀಡುತ್ತೇವೆ ಎಂಬ ಆಶ್ವಾಸನೆ.
ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಇದೇ ಆಶ್ವಾಸನೆ ನೀಡಿದ್ದರೂ ಅದನ್ನು ಹಾರ್ದಿಕ್ ತಿರಸ್ಕರಿಸಿದ್ದರು. ಆದರೆ ಇದೀಗ ಯಾವೊಂದು ಆಶ್ವಾಸನೆ ನೀಡದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ಸಂಘಟನೆಗಳು ಹಾರ್ದಿಕ್‌ರನ್ನು ಟೀಕಿಸುತ್ತಿವೆ.
ಹಾರ್ದಿಕ್ ಜತೆ ಸಂಧಾನ ಮಾತುಕತೆ ನಡೆಸಲು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್ ಸಿಬಲ್ ಮುಂದಿನ ವಾರ ಗುಜರಾತ್‌ಗೆ ಆಗಮಿಸಲಿದ್ದಾರೆ. ಹಾರ್ದಿಕ್‌ರದ್ದು ಅಸ್ಥಿರ ಮನಸ್ಸು. ಕಾಂಗ್ರೆಸ್‌ನಿಂದ ಇನ್ನಷ್ಟು ಒತ್ತಡ ಬಂದರೆ ಅವರು ತನ್ನ ನಿಲುವನ್ನು ಮತ್ತೆ ಬದಲಿಸಬಹುದು ಎಂದು ಹೇಳಲಾಗುತ್ತಿದೆ.







