ಗೌರಿ ಲಂಕೇಶ್ ದಲಿತರು, ರೈತರು ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಿದ್ದರು : ದಿನೇಶ್ ಅಮೀನ್ ಮಟ್ಟು

ದಾವಣಗೆರೆ,ನ.2 : ಗೌರಿ ಲಂಕೇಶ್ ದಲಿತರು, ರೈತರು ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಗೌರಿಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ, “ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದಿರುವ ಸವಾಲುಗಳು” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲೆನಿನ್ ಕಾಲದಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡೆತಡೆಗಳು ಇದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಜನ ಹೋರಾಟ ನಡೆಸಿದ್ದಾರೆ. ಸಾವಿರಾರು ಜನರು ಬಲಿಯಾಗಿದ್ದಾರೆ. ನಮ್ಮ ದೇಶದಲ್ಲಿ ಸಾಹಿತಿ ಎಂ.ಎಂ. ಕಲ್ಬುರ್ಗಿ, ದಾಬೋಲ್ಕರ್. ಗೌರಿಲಂಕೇಶ್ ಇತರರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಿದ್ದಕ್ಕೆ ಬಲಿಯಾಗಿರುವುದು ದುರಂತ ಎಂದರು.
ನಮ್ಮ ಅಭಿವ್ಯಕ್ತಿ ಸ್ವತಂತ್ರವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಧ್ವನಿ ಎತ್ತಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಮ್ಮ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ಒಪ್ಪಿಕೊಳ್ಳುತ್ತಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ಎದುರಿಸುವುದು ದೊಡ್ಡ ಸವಾಲಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತಾ ಇಲ್ಲ. ಅದನ್ನು ಅಭಿವ್ಯಕ್ತ ಸ್ವಾತಂತ್ರ್ಯವನ್ನು ದಮನ ಮಾಡುವುದಕ್ಕೆ ಬೇರೆ ಮಾರ್ಗವನ್ನು ಹಿಡಿಯುತ್ತಿದೆ ಎಂದು ಹೇಳಿದರು. ಸತ್ಯ ಹೇಳುವವರ ಬಗ್ಗೆ ವರ್ತಮಾನ ಬಹಳ ಕ್ರೂರವಾಗಿದೆ. ಅನ್ಯಾಯದ ವಿರುದ್ದ ಧ್ವನಿಎತ್ತಬೇಕು. ಭ್ರಷ್ಟಚಾರ, ತಪ್ಪುಗಳ ವಿರುದ್ದ ಧ್ವನಿ ಎತ್ತಿದರೆ ನಾವು ಗೌರಿ ಲಂಕೇಶ್ ಅವರಿಗೆ ನೀಡುವ ದೊಡ್ಡ ಗೌರವ ಎಂದರು.
ನೋಟು ಅಮಾನ್ಯೀಕರಣದಿಂದ ಮತ್ತು ಜಿಎಸ್‍ಟಿಯಿಂದ ಸಾಮಾನ್ಯ ಜನಕ್ಕೆ ಸಾಕಷ್ಟು ತೊಂದರೆಯುಂಟಾಗಿದೆ. ಇದನ್ನು ಮರೆಮಾಚಲು ದೇಶಭಕ್ತಿಯ ನಶೆಯನ್ನು ಯುವ ಜನರಲ್ಲಿ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ. 2 ಲಕ್ಷ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತವೆ ಎಂದವರು ಈಗ ಕೈಚೆಲ್ಲಿ ಕುಳಿತಿದ್ದಾರೆ. ಇದರಿಂದ ಯುವ ಸಮುದಾಯಕ್ಕೆ ಬಾರಿ ನಿರಾಶೆಯಾಗಿದೆ ಎಂದರು.
ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ಕುರಿತು ಚರ್ಚೆಯಾಗಬೇಕು,ಇದರ ಮೇಲೆ ಸರಕಾರದ ಭವಿಷ್ಯ ನಿರ್ಧಾರವಾಗಬೇಕು. ಜಾತಿ, ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡಬಾರದು. ಮೀನು, ಮಾಂಸ ತಿಂದ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಓಟು ಕೇಳುವ ರಾಜಕಾರಣ ಬರಬಾರದು. ಯುವಕರು ಇಂತಹ ವಿಷಯಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ತಿಳಿಸಿದರು.
ಕೋಮುಸೌಹಾರ್ದ ವೇದಿಕೆಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಬಲಪಂಥೀಯರು ವಿಷದ ಕಾರ್ಖಾನೆ ಇಟ್ಟಿದ್ದಾರೆ. ಅದನ್ನು ಯುವಜನರಲ್ಲಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಗೌರಿಲಂಕೇಶ ಅವರಲ್ಲಿ ಮಾತೃಹೃದಯವಿತ್ತು. ಅಂತಹ ಗೌರಿಯನ್ನು ಹತ್ಯೆ ಮಾಡಿರುವುದು ಖಂಡನೀಯ. ನಮಗೆ ಹಂತಕರು ಮುಖ್ಯವಲ್ಲ. ಅದರ ಹಿಂದೆ ಇರುವ ಸಂಘಟನೆಗಳನ್ನು ಹಿಡಿಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಗಾಂಧಿ ಕೊಂದವರೇ ಗೌರಿಯನ್ನು ಕೊಂದಿದ್ದಾರೆ. ಬಂಡವಾಳ ಶಾಹಿ ಮತ್ತು ಬ್ರಾಹ್ಮಣ ಶಾಹಿ ಈ ದೇಶದ ದೊಡ್ಡ ಶತ್ರುಗಳು ಎಂದರು.
ಉಪನ್ಯಾಸಕ ರಾಮಚಂದ್ರಪ್ಪ, ಅನಿಷ್ ಪಾಷಾ, ಕೆ.ಎಲ್.ಭಟ್, ಆವರಗೆರೆ ಚಂದ್ರು, ಅರುಣ್ ಕುಮಾರ್ ಕುರುಡಿ, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.







