ಕಳವು ಪ್ರಕರಣ: ಮಹಿಳೆ ಸೇರಿ ಮೂವರ ಬಂಧನ

ಮಂಗಳೂರು, ನ. 2: ಹಾಡಹಗಲೇ ನಗರದ ಸರಕಾರಿ ವಸತಿ ಗೃಹಗಳ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಕಳ್ಳತನ ಮಾಡಿದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದಲ್ಲಿ ಇತ್ತೀಚೆಗೆ ಹಾಡಹಗಲೇ ಸರಕಾರಿ ವಸತಿ ಗೃಹಗಳ ಹಾಗೂ ಒಂಟಿ ಮನೆಗಳ ಬೀಗ ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಕಳ್ಳರ ಜಾಲದ ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಟಿಪಳ್ಳ ಕಾಡಚ್ಚಿಲ್ ನಿವಾಸಿ ಜಯಂತ ಸಂದೀಪ್ ಠಾಪೋರಿ (23) ಹಾಗೂ ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇರಿಸಿದ ಆರೋಪಿಗಳಾದ ಕಾಟಿಪಳ್ಳ ಮದ್ಯ ಬಳಿಯ ವಿಜ್ವಲ್ ಪೂಜಾರಿ (23), ಗುಣವತಿ (48) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಜಯಂತ ಸಂದೀಪ್ ಠಾಪೋರಿ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ.
ಪ್ರಕರಣ ವಿವರ: ಅ.12ರಂದು ಮಂಗಳೂರು ನಗರದ ಬೊಂದೇಲ್ ಮೆಸ್ಕಾ ಕೆಪಿಟಿಸಿಎಲ್ ವಸತಿಗೃಹ ನಿವಾಸಿ ಜೋಸ್ ಮತ್ತು ಅವರ ಪತ್ನಿ ಮಧ್ಯಾಹ್ನ 1:30ಕ್ಕೆ ಹೊರಗೆ ಹೋಗಿದ್ದರು. ಸಂಜೆ ಸುಮಾರು 5:30ಕ್ಕೆ ವಾಪಾಸು ಬಂದಿದ್ದು, ಈ ವೇಳೆ ಬೆಡ್ ರೂಮಿನ ಎರಡು ಕಪಾಟುಗಳು ತೆರೆದಿದ್ದವು. ಅದರಲ್ಲಿದ್ದ 3,50,000 ರೂ. ಮೌಲ್ಯದ ಸುಮಾರು 20 ಪವನ್ ಚಿನ್ನಾಭರಣಗಳು ಕಳ್ಳತನವಾಗಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅ. 24ರಂದು ಮಂಗಳೂರು ಉರ್ವಾಸ್ಟೋರ್ ಪಿಡಬ್ಲೂಡಿ ಕ್ವಾಟರ್ಸ್ ನಿವಾಸಿ ಹರೀಶ್ ಕುಮಾರ್ ಅವರು ಬೆಳಗ್ಗೆ 9:45ಕ್ಕೆ ಕ್ವಾಟರ್ಸ್‌ನ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಬಂದು ವಸತಿಗೃಹದ ಬೀಗವನ್ನು ತೆರೆದ ಸಂದರ್ಭ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬೀಗವನ್ನು ಮುರಿದು ಕಪಾಟಿನಲ್ಲಿದ್ದ ಒಟ್ಟು 20 ಪವನ್ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಜಯಂತ್ ಸಂದೀಪ್ ಠಾಪೋರಿ ಎಂಬಾತನು ಈ ಹಿಂದೆ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನು ಸುಮಾರು 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈತನು ಈ ಹಿಂದೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾಸ್ಟೋರ್ ಪಿಡಬ್ಲೂಡಿ ವಸತಿಗೃಹದ ಬಾಗಿಲಿನ ಬೀಗವನ್ನು ಮುರಿದು ಕಳವುಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ಈ ಹಿಂದೆ 2014ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, 2016ರಲ್ಲಿ ಸುಲಿಗೆ ಪ್ರಕರಣ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಆರೋಪಿ ವಿಜ್ವಲ್ ಪೂಜಾರಿ ಎಂಬಾತ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೇಳಾರು ಎಂಬಲ್ಲಿ ಮಣಿಕಂಠ ಎಂಬಾತನ ಕೊಲೆ ಪ್ರಕರಣ, ಕಾಟಿಪಳ್ಳದಲ್ಲಿ ಯುವಕನೊಬ್ಬನ ಮೇಲೆ ನಡೆದ ಕೊಲೆ ಯತ್ನ ಪ್ರಕರಣ, ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಕಟ್ಟೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ, ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಈಗ ಸುಮಾರು 4 ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದ. ಈತನು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ಕಾಯ್ದೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿ ಕೋಡಿಕೆರೆ ಮನೋಜ್ ಎಂಬಾತನ ಸಹಚರ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜಯಂತ್ ಸಂದೀಪ್ ಠಾಪೋರಿಯು ಕಳವುಗೈದ ಚಿನ್ನಾಭರಣಗಳನ್ನು ವಿಜ್ವಲ್ ಪೂಜಾರಿ ಹಾಗೂ ಗುಣವತಿ ಮೂಲಕ ಸುರತ್ಕಲ್‌ನ 2 ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇರಿಸಿದ್ದು, ಅಡಮಾನ ಇರಿಸಿ ಬಂದ ಹಣದ ಸ್ವಲ್ಪ ಅಂಶವನ್ನು ಇವರಿಬ್ಬರೂ ತಮ್ಮಲ್ಲಿರಿಸಿದ್ದರು. ಉರ್ವಾ ಠಾಣಾ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲ್ಕಂಡ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳ ವಶದಿಂದ ಒಟ್ಟು 131 ಗ್ರಾಂ ಚಿನ್ನಾಭರಣಗಳು, 15,000 ರೂ. ನಗದು, ಮೊಬೈಲ್ ಫೋನ್-1, ರೋಲ್ಡ್ ಗೋಲ್ಡ್ ಆಭರಣಗಳು, ಕಳ್ಳತನಕ್ಕೆ ಉಪಯೋಗಿಸಿದ ಚೂರಿ, ಕಬ್ಬಿಣದ ರಾಡ್, ಬಜಾಜ್ ಪಲ್ಸರ್ ಬೈಕ್, ಮಹೇಂದ್ರ ಬೊಲೆರೋ ಜೀಪುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8,44,657 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ. ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.







