ಜನ ಒಪ್ಪಿದಕ್ಕೆ ಟಿಪ್ಪು ಜಯಂತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.2: ಮೈಸೂರು ಹುಲಿ ಟಿಪ್ಪುಸುಲ್ತಾನ್ ಒಬ್ಬ ದೇಶಪ್ರೇಮಿ. ಆತ ಹಿಂದೂ ಅಥವಾ ಯಾವುದೇ ಜನಾಂಗದ ವಿರೋಧಿ ಆಗಿರಲಿಲ್ಲ. ಹೀಗಾಗಿ, ಜನ ಒಪ್ಪಿದಕ್ಕೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಹಿಂದೂ ವಿರೋಧಿ ಆಗಿದ್ದರೆ ಶೃಂಗೇರಿ ಮಠಕ್ಕೆ, ನಂಜನಗೂಡು ದೇವಾಲಯಕ್ಕೆ ಸಹಾಯ ಮಾಡುತ್ತಿರಲಿಲ್ಲ. ರಾಜ್ಯದಲ್ಲಿ ರೇಷ್ಮೆ ಕೃಷಿ ಬೆಳೆದಿದ್ದರೆ ಅದಕ್ಕೆ ಟಿಪ್ಪು ಕಾರಣ. ನಿಜವಾಗಿಯೂ ಟಿಪ್ಪು ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ಕೆಜೆಪಿಯಲ್ಲಿದ್ದಾಗ ಟಿಪ್ಪು ಬಗ್ಗೆ ಯಡಿಯೂರಪ್ಪ ಅವರೇನು ಹೇಳಿದ್ದರು. ರಾಷ್ಟ್ರಪತಿಯವರು ಟಿಪ್ಪು ಸಾಧನೆ ಬಣ್ಣಿಸಿದ ಬಳಿಕ ಬಿಜೆಪಿಯವರಿಗೆ ಜ್ಞಾನೋದಯವಾಗಿದೆ. ಹೀಗಾಗಿ, ಟಿಪ್ಪು ಜಯಂತಿಯನ್ನು ಟೀಕಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದ ಅವರು, ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಅವರು ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಪೋಸು ನೀಡಿರಲಿಲ್ಲವೇ. ಇತಿಹಾಸ ನಿರ್ಮಿಸಿದವರನ್ನು ನೆನಪು ಮಾಡಿಕೊಳ್ಳುವ ಬುದ್ಧಿ ಬಿಜೆಪಿಯವರಿಗೆ ಇಲ್ಲ. ಇತಿಹಾಸ ತಿರುಚುವುದಷ್ಟೇ ಅವರಿಗೆ ಗೊತ್ತು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾರೇ ಕಾನೂನು ಕೈಗೆ ತೆಗೆದುಕೊಂಡರೆ, ಸಮಾಜದಲ್ಲಿ ಶಾಂತಿ ಕದಡಲು ಮುಂದಾದರೆ, ಪ್ರಚೋದನಕಾರಿ ಭಾಷಣ ಮಾಡಿ ಶಾಂತಿಗೆ ಭಂಗ ಉಂಟು ಮಾಡಿದರೆ ಅಂತಹ ಶಕ್ತಿಗಳನ್ನು ಬಲಿ ಹಾಕುತ್ತೇವೆ. ಪರಿವರ್ತನಾ ರ್ಯಾಲಿ ಮತ್ತು ಟಿಪ್ಪುಜಯಂತಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಗಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿ ಪ್ರಮುಖರಿದ್ದರು.







